ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷ ಸೇರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಬಿಜೆಪಿ ಸೇರಿದರು.
ಭಾನುವಾರ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಹಾಗೂ ಸಾಗರದ ಯುವ ರಾಜಕಾರಣಿ ಕೆ. ಎಸ್. ಪ್ರಶಾಂತ್ ಬಿಜೆಪಿ ಸೇರ್ಪಡೆಗೊಂಡರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಿವಮೊಗ್ಗ ನಗರ ಶಾಸಕ ಶಾಸಕ ಕೆ. ಎಸ್. ಈಶ್ವರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮುಂತಾದವರು ಉಪಸ್ಥಿತಿಯಲ್ಲಿ ಅವರು ಪಕ್ಷ ಸೇರ್ಪಡೆಯಾದರು.
ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಿ ಎಂದು ಗಾಂಧೀಜಿ ಅವರು ತಿಳಿಸಿದ್ದರು. ಸ್ವಾರ್ಥಿಗಳು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂಬುದು ಅವರಿಗೆ ಮೊದಲೆ ಗೊತ್ತಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ದುರಾಡಳಿ, ಧರ್ಮಾಧಾರಿತ ರಾಜಕಾರಣ ಜನರಿಗೆ ಅರ್ಥವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತಿದೆ. ಡಾ. ಧನಂಜಯ ಸರ್ಜಿ ಮತ್ತು ಪ್ರಶಾಂತ್ ಅವರಂತಹ ವಿದ್ಯಾವಂತರು ಕೂಡ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಡಾ. ಧನಂಜಯ ಸರ್ಜಿ ಮತ್ತು ಪ್ರಶಾಂತ್ ಅವರ ಸೇರ್ಪಡೆಯಿಂದ ಪಕ್ಷದ ಶಿಕ್ತಿ ಹೆಚ್ಚಾಗಿದೆ. ಜವಾಬ್ದಾರಿ ದುಪ್ಪಟ್ಟಾಗಿದೆ. ಎಲ್ಲರು ಒಗ್ಗೂಡಿ ಶಿವಮೊಗ್ಗವನ್ನು ಮಾದರಿ ಜಿಲ್ಲೆ ಮಾಡೋಣ ಎಂದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಡಾ. ಧನಂಜಯ ಸರ್ಜಿ ಅವರು, ಆರ್.ಎಸ್.ಎಸ್ ಪ್ರಮುಖರ ಗರಡಿಯಲ್ಲಿ ಬೆಳೆದಿದ್ದೇನೆ. ಶಿಸ್ತು, ಸಂಸ್ಕಾರ, ಉದಾರತೆಯನ್ನು ಸಂಘಟನೆ ಕಲಿಸಿದೆ. ಬಿಜೆಪಿಯಲ್ಲಿಯು ಶಿಸ್ತು, ಉದಾರತೆ ಇದೆ. ಹಾಗಾಗಿ ಪಕ್ಷ ಸೇರ್ಪಡೆಯಾಗಿದ್ದೇನೆ. ಪಕ್ಷ ಯಾವುದೆ ಜವಾಬ್ದಾರಿ ವಹಿಸಿದರು ನಿಷ್ಠೆಯಿಂದ ಮಾಡುತ್ತೇನೆ ಎಂದರು.
ಕೆ.ಎಸ್.ಪ್ರಶಾಂತ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಯುವಕರನ್ನು ಮುಂದೆ ತರುವ ಪ್ರಯತ್ನವಾಗುತ್ತಿಲ್ಲ. ಇದೆ ಕಾರಣಕ್ಕೆ ಪ್ರತ್ಯೇಕ ವೇದಿಕೆ ಸೃಷ್ಟಿಸಿಕೊಂಡು ಉದ್ಯೋಗ ಕೊಡಿಸುವ ಪ್ರಯತ್ನ ಮಾಡಿದ್ದೆವು. ಬಜರಂಗದಳ ಕಾರ್ಯಕರ್ತರು ಈ ಮುಂಚಿನಿಂದಲು ಪರಿಚಯವಿದ್ದರು. ಅವರಿಂದ ಸಂಘದ ಪರಿಚಯವಾಯಿತು. ಮನ ಪರಿವರ್ತನೆಯಾಗಿ ಬಿಜೆಪಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದೇನೆ ಎಂದರು.
ಇದೇ ಸಂಧರ್ಭದಲ್ಲಿ 15 ಕ್ಕೂ ಹೆಚ್ಚು ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.