ಹೊಸನಗರದಿಂದ ಕುಮುಟಾ ಕಡೆಗೆ ತೆರಳುತಿದ್ದ ಮಾರುತಿ ಓಮಿನಿ ಕಾರು ಆಕ್ಸಿಡೆಂಟ್ ಆಗಿ, ಜಖಂ ಆದ ವಾಹನದಲ್ಲಿ ಸಿಲುಕಿ ನರಳುತ್ತಿದ್ದ ವ್ಯಕ್ತಿಯನ್ನು 112 ಸಿಬ್ಬಂದಿ ಕಾಪಾಡಿದ್ಧಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಬೆಳಗ್ಗಿನ ಜಾವ ಸಾಗರ ತಾಲ್ಲೂಕಿನ ಶಿರವಂತೆ ಬಳಿ ಅಪಘಾತವೊಂದು ಸಂಭವಿಸಿತ್ತು. ಹೊಸನಗರ ಮೂಲದ ಪ್ರವೀಣ್ ಓಮಿನಿ ಕಾರಿನಲ್ಲಿ ಕುಮಟಾಕ್ಕೆ ಹೋಗುತ್ತಿದ್ದ ಸಂಧರ್ಭದಲ್ಲಿ ಅಪಘಾತವಾಗಿತ್ತು.
ತಕ್ಷಣ ಸ್ಥಳೀಯರು 112 ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಚಾರ ಕೇಳಿ ತಕ್ಷಣ ಹೊರಟ ಸಾಗರ ಗ್ರಾಮಾಂತರ ಸ್ಟೇಷನ್ನ ಹೆಚ್ಸಿ ಹುಚ್ಚಪ್ಪ ಎಂ ಬಿ ಮತ್ತು ಚಾಲಕ ಸಂದೀಪ್ ಸ್ಥಳಕ್ಕೆ ಬಂದಿದ್ದಾರೆ.
ಆದರೆ ಘಟನೆಯಲ್ಲಿ ವಾಹನ ಜಖಂಗೊಂಡಿದ್ದರಿಂದ ಗಾಯಗೊಂಡಿದ್ದ ಚಾಲಕ ಪ್ರವೀಣ್ರನ್ನ ಅದರಿಂದ ಹೊರತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಕ್ಷಣ 112 ಸಿಬ್ಬಂದಿ ಸಾಗರ ಟೌನ್ಗೆ ವಾಪಸ್ ಆಗಿ ಮೆಕಾನಿಕ್ ಒಬ್ಬರನ್ನ ಕರೆದುಕೊಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮೆಕಾನಿಕ್ ರ ಸಹಾಯದೊಂದಿಗೆ ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ, ಗಾಯಾಳುವನ್ನು ವಾಹನದಿಂದ ಸುರಕ್ಷಿತವಾಗಿ ಹೊರಕರೆದುಕೊಂಡು ಬಂದ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಾಲಕ ಪ್ರವೀಣ್ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಹಾಯಕ್ಕೆ ದಾವಿಸಿ, ಜೀವ ಉಳಿಸಿದ ಸಾಗರ ಗ್ರಾಮಾಂತರ ಸ್ಟೇಷನ್ ಸಿಬ್ಬಂದಿಗೆ ಶಿವಮೊಗ್ಗ ಎಸ್ಪಿ ಜಿಕೆ ಮಿಥುನ್ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.