ಸ್ನೇಹಿತರೊಂದಿಗೆ ಅರಣ್ಯ ಪ್ರದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದ ಸ್ಥಳಕ್ಕೆ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಬಂದ 12 ಜನರ ಖತರ್ ನಾಕ್ ಗ್ಯಾಂಗ್ ಆ ದಿನ ಹುಟ್ಟುಹಬ್ಬ ಸಂಭ್ರಮದಲ್ಲಿ ನೆರೆದಿದ್ದವರನ್ನೆಲ್ಲಾ ಲೂಟಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಈ ಹಿನ್ನಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರು ಜನ ಆರೋಪಿಗಳನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಸಾರಾಂಶ :
13-11-2022 ರಂದು ಸಂಜೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಬೆನವಳ್ಳಿ ಗ್ರಾಮದ ಹತ್ತಿರ ಅರಣ್ಯ ಪ್ರದೇಶದಲ್ಲಿ ಯತೀಶ ಮತ್ತು ಆತನ ಸ್ನೇಹಿತರು ಸೇರಿಕೊಂಡು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾಗ ಸುಮಾರು 12 ಜನರು ಮುಖಕ್ಕೆ ಮಾಸ್ಕ್ ದರಿಸಿಕೊಂಡು ಬೈಕ್ ನಲ್ಲಿ ಬಂದು ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದ ಯುವಕರನ್ನು ಹೊಡೆದು ಹೆದರಿಸಿ ಇವರ ಬಳಿ ಇದ್ದ ನಗದು ಹಣವನ್ನು ಕಿತ್ತುಕೊಂಡು ಹೋದ ಬಗ್ಗೆ ದರೋಡೆ ಪ್ರಕರಣ ದಾಖಲಾಗಿತ್ತು.ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದ ಯತೀಶ್ ಮೊಬೈಲ್ ಸೇರಿದಂತೆ ಹಲವು ಮೊಬೈಲ್ ಗಳನ್ನ ಕಿತ್ತುಕೊಂಡು ಹೊಗಿದ್ದರು.
ಸದರಿ ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ದಿನಾಂಕಃ- 01-12-2022 ರಂದು ಸದರಿ ಪ್ರಕರಣದ ಆರೋಪಿತರನ್ನ ಪತ್ತೆಹಚ್ಚಿದ್ದಾರೆ.1) ಶಿವಮೊಗ್ಗ ಟ್ಯಾಂಕ್ ಮೊಲ್ಲಾದ ನಿವಾಸಿ ಶಫೀವುಲ್ಲಾ @ ಟ್ಯಾಂಕ್ ಮೊಹಲ್ಲಾ ಶಫಿ, 35 ವರ್ಷ,2) ಶೇಷಾದ್ರಿಪುರಂನ ಮಾರುತಿ @ ಕ್ಯಾಂಡಿ, 28 ವರ್ಷ 3) ಮೆಹದಿ ನಗರದ ಆವೇಜ್ ಅಲಿ(22) 4) ಬಸವನಗುಡಿ ಹೊನ್ನೇಶ ಪಿ. ಜಿ @ ಚಿನ್ನು(24) 5) ಬಸವನಗುಡಿಯ ಗಣೇಶ ಜಿ, 22 ವರ್ಷ, 6) ವಿನೋದ ಎಂ, 19 ವರ್ಷ, ಗಳನ್ನ ಬಂಧಿಸಲಾಗಿದೆ.
ಆರೋಪಿತರಿಂದ ರೂ 830/- ನಗದು ಹಣ, 05 ಮೊಬೈಲ್ ಫೋನ್ ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಹಿಂದೆ ಆರೋಪಿತರೆಲ್ಲರೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರುಗಳ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಇನ್ನುಳಿದ 6 ಜನ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿರುತ್ತದೆ