ಹೆದ್ದಾರಿಪುರ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಕೆಟ್ ಪ್ರೀಮಿಯರ್ ಆಯೋಜನೆ ಗರಿಗೆದರತೊಡಗಿವೆ. 
ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್(HPL) ಕ್ರಿಕೆಟ್ ಟೂರ್ನಿ ಆಯೋಜನೆಗೆ ಈಗ ಭರ್ಜರಿ ಚಾಲನೆ ಸಿಕ್ಕಿದ್ದು, ಭಾನುವಾರ ವೃತ್ತಿಪರ ಶೈಲಿಯಲ್ಲಿ ಐಪಿಎಲ್ ಹರಾಜು ನೆನಪಿಸುವಂತೆ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ನಡೆದಿದೆ.
ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು, HPL ಹರಾಜಿನಲ್ಲಿ ಭಾಗವಹಿಸಲು ಇನ್ನೂರಕ್ಕೂ ಅಧಿಕ ಅಟಗಾರರು ತಮ್ಮ ಹೆಸರು ನೋಂದಾಯಿಸಿದ್ದರು. ಅಂಕಗಳ ಆಧಾರದಲ್ಲಿ ಆಟಗಾರರನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಎರಡನೇ ಆವೃತ್ತಿಯ HPL ಟೂರ್ನಿಗೂ ಮುನ್ನ ಎರಡು ಐಕಾನ್ ಆಟಗಾರರನ್ನು ಆಯ್ದುಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. 
ಕಳೆದ ಆವೃತ್ತಿಯಲ್ಲಿ ಪಾಲ್ಗೊಂಡ ಆಟಗಾರರ ವಿವರ ಹಾಗೂ ಅವರ ಪ್ರದರ್ಶನವನ್ನು ಫೋಟೋ ಸ್ಲೈಡ್ಸ್ಗಳ ಮೂಲಕ ಡಿಸ್ಪ್ಲೇ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲಾ 12 ಫ್ರಾಂಚೈಸಿಗಳು ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದವು.
ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಕಳೆದ ವರ್ಷ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯು ತುಂಬಾ ಅಚ್ಚುಕಟ್ಟಾಗಿ ನೆರವೇರಿತ್ತು. ಇದೀಗ ಎರಡನೇ ಆವೃತ್ತಿಯ HPL ಟೂರ್ನಿಗೆ ಮತ್ತಷ್ಟು ಹೈಟೆಕ್ ಟಚ್ ನೀಡಲಾಗಿದ್ದು, ಹರಾಜಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು HPL ಕ್ರಿಕೆಟ್ ಹೆದ್ದಾರಿಪುರ ಫೇಸ್ಬುಕ್ ಪೇಜ್ನಿಂದ ಫೇಸ್ಬುಕ್ ಲೈವ್ ನೀಡಲಾಗಿತ್ತು. ಈ ಹರಾಜು ಪ್ರಕ್ರಿಯೆನ್ನು ಹೆದ್ದಾರಿಪುರ ಪ್ರೌಢಶಾಲಾ ಶಿಕ್ಷಕರಾದ ಸುರೇಶಪ್ಪ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು, ‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಪುನೀತ್ ಗೌಡ ಫ್ರೆಂಡ್ಸ್ ಹೆದ್ದಾರಿಪುರ, ಜಂಬಳ್ಳಿ ಜಾಗ್ವಾರ್ಸ್, ಸಮನ್ವಯ ಸ್ಟಾರ್ಸ್, ಕೊಡಸೆ-ಗಿಣಿಸೆ, ಮಹಾಶಕ್ತಿ ಫ್ರೆಂಡ್ಸ್ ಹೆದ್ದಾರಿಪುರ, ಕಲ್ಲೂರು ಕಲಿಗಳು ಹಾಗೂ ಟ್ರೋಫಿ ಫೈಟರ್ಸ್ ತಳಲೆ ತಂಡಗಳು ಸ್ಥಾನ ಪಡೆದಿವೆ. ಇನ್ನು ‘ಬಿ’ ಗುಂಪಿನಲ್ಲಿ ತೊರೆಗದ್ದೆ ಬ್ರದರ್ಸ್, ಭಜರಂಗಿ ಬಾಯ್ಸ್, ಹಾರಂಬಳ್ಳಿ, ಮಲ್ನಾಡ್ ಫ್ರೆಂಡ್ಸ್, ಸುಳಕೋಡು, ಅಪ್ಪು ಕ್ರಿಕೆಟರ್ಸ್, ಕಗಲಿಜೆಡ್ಡು, ಸಂಚಲನ ಕ್ರಿಕೆಟರ್ಸ್ ಕೊಳವಳ್ಳಿ ತಂಡಗಳು ಸ್ಥಾನ ಪಡೆದಿವೆ. ಮೊದಲಿಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಎರಡು ಗ್ರೂಪ್ ಹಂತದಲ್ಲಿ ತಲಾ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಸೆಮೀಸ್ ಪ್ರವೇಶಿಸಿದರೇ, ಗುಂಪಿನಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ತಂಡಗಳು ನಾಕೌಟ್ ಪಂದ್ಯಗಳನ್ನು ಆಡಲಿವೆ. 
ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯು ಜನವರಿ 21,22 ಹಾಗೂ 23ರಂದು ಹೆದ್ದಾರಿಪುರ ಪ್ರೌಢ ಶಾಲಾ ಮೈದಾನದಲ್ಲಿ ಪಂದ್ಯಾಟಗಳು ನಡೆಯಲಿವೆ. ಈ ಟೂರ್ನಿಯಲ್ಲಿ ವಿಜೇತರಾಗುವ ತಂಡವು ಮೊದಲ ಬಹುಮಾನವಾಗಿ 25 ಸಾವಿರ ರುಪಾಯಿ ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡವು 20 ಸಾವಿರ ಹಾಗೂ ಟ್ರೋಫಿ, ಎರಡನೇ ರನ್ನರ್ ಅಪ್ ತಂಡವು 15 ಸಾವಿರ ಹಾಗೂ ಟ್ರೋಫಿ ಮತ್ತು ಮೂರನೇ ರನ್ನರ್ ಅಪ್ ತಂಡವು 10 ಸಾವಿರ ರುಪಾಯಿ ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಳ್ಳಲಿವೆ.
		 
                         
                         
                         
                         
                         
                         
                         
                         
                         
                        