ರಿಪ್ಪನ್ ಪೇಟೆ : ಮಕ್ಕಳ ಕಲಿಕೆ ಮೇಲೆ ಕೊರೊನಾ ಮಹಾಮಾರಿಯಿಂದ ದುಷ್ಪಪರಿಣಾಮ ಉಂಟಾಗಿತ್ತು. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನೂತನ ಶೈಲಿಯಲ್ಲಿ ರೂಪಿಸುತ್ತಾ ಬಂದಿದೆ. ಸದ್ಯ ಕಲಿಕಾ ಹಬ್ಬ ಯೋಜನೆ ರೂಪಿಸುವ ಮೂಲಕ ಮಕ್ಕಳ ಕಲಿಕೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರೌಢ ಶಾಲೆಯಲ್ಲಿ ಬುಧವಾರ ಕಲಿಕಾ ಹಬ್ಬ ಯೋಜನೆಯ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಸಂತಸದಾಯಕ ಕಲಿಕೆ ಮಕ್ಕಳಲ್ಲಿ ಮೂಡಿಸ ಲಾಗುತ್ತಿದೆ,ಮಕ್ಕಳು ಎಲ್ಲಾ ಬಗೆಯ ಜ್ಞಾನವನ್ನು ಆಪ್ತತೆ ಯಿಂದ ಕಲಿತು ಅಭಿವ್ಯಕ್ತಿ ಪಡಿಸಿದಾಗ ಹೆಚ್ಚು ಗುಣಾತ್ಮಕ ಕಲಿಕೆ ಸಾಧ್ಯ ಎಂದರು.
ಮಕ್ಕಳು ಕೇವಲ ಮನೆಯ ವಾತಾವರಣಕ್ಕೆ ಹೊಂದಿಕೊಂಡು ಕಲಿಕೆಯಿಂದ ದೂರಾಗಿದ್ದರು. ಅದು ಗ್ರಾಮೀಣ ಮಟ್ಟದ ಮಕ್ಕಳ ಕಲಿಕೆಗೆ ಅನೇಕ ತೊಂದರೆಗಳು ಉಂಟಾಗಿದ್ದವು. ಭೌತಿಕವಾಗಿ ತರಗತಿಗಳು ನಿರ್ವಹಣೆಯಾಗದೆ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತಗೊಂಡಿತು. ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಾಗಿನಿಂದ ಅನೇಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದ ಮೂಲಕ ವಿವಿಧ ಆಯಾಮಗಳಿಂದ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದೇವೆ ಎಂದರು.
ಡಿ.ವೈ.ಪಿ.ಸಿ. ಉಮಾಮಹೇಶ ಮಾತನಾಡಿ ಶಿಕ್ಷಣ ಇಲಾಖೆಯು ನಿಗದಿಪಡಿಸಿರುವ ಕಲಿಕಾ ಸಾಮರ್ಥ್ಯಗಳನ್ನು ತರಗತಿ ಕೊನೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಕಾರ್ಯಪ್ರವೃತ್ತರಾಗಿದ್ದಾರೆ. ಅದೇ ರೀತಿಯಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಅತ್ಯಂತ ಕಡು ಬಡತನದ ಮಕ್ಕಳು ಶಾಲೆಗೆ ಬರುವುದರಿಂದ ಶಿಕ್ಷಕರು ಹೆಚ್ಚಿನ ಕಾಳಜಿವಹಿಸಿ ಉತ್ತಮ ಶಿಕ್ಷಣ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಹೊಸನಗರ ತಾಲೂಕು ಬಿಇಒ ಕೃಷ್ಣಮೂರ್ತಿ ಹಾಗೂ ಉಪ ಪ್ರಾಚಾರ್ಯ ಕೆಸಿನಮನೆ ರತ್ನಾಕರ್ ಹಾಗೂ ರಾಜ್ಯ ತರಬೇತಿ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಮೂರು ದಿನಗಳ ಈ ತರಬೇತಿಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಟ್ಟು 125 ಕ್ಕೂ ಅಧಿಕ ಶಿಕ್ಷಕರು ಅಗಮಿಸಿದ್ದರು.