ರಿಪ್ಪನ್ಪೇಟೆ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬರುವೆ ಶಾಲಾ ಮೈದಾನದಲ್ಲಿ ಡಿ. 9 ಮತ್ತು 10 ರಂದು ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಅಭಿನಂದನಾ ಮಹೋತ್ಸವ ಹಾಗೂ ನಗೆಹಬ್ಬ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ ಹಾಗೂ ಜೆಡಿಎಸ್ ಮುಖಂಡ ಅರ್ ಎ ಚಾಬುಸಾಬ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿವಂಗತ ಜಿ.ಆರ್.ಕೆ. ಮೂರ್ತಿಯವರ ಸಮಾಜ ಸೇವೆಯನ್ನು ಸ್ಮರಿಸುತ್ತ ಪಟ್ಟಣದಲ್ಲಿ ಎರಡು ದಿನಗಳ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ರಿಪ್ಪನ್ಪೇಟೆ, ಅರಸಾಳು, ಕೆಂಚನಾಲ, ಬಾಳೂರು, ಹರತಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ, ಮಾರುತಿಪುರ, ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಎರಡೂ ದಿನದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಅಂಗನವಾಡಿ, ಆಶಾ, ಆರೋಗ್ಯ, ಶಿಕ್ಷಣ, ಗೃಹ, ಮೆಸ್ಕಾಂ, ಪತ್ರಿಕಾ ಮಾದ್ಯಮ, ಕಂದಾಯ ಇನ್ನಿತರ ಇಲಾಖೆಗಳೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿ, ಸಂಗೀತ, ಕ್ರೀಡೆ, ಹೋರಾಟ ಕ್ಷೇತ್ರದಲ್ಲಿ ಸಮಾಜದ ಇನ್ನಿತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸುಮಾರು 700 ಜನರಿಗೆ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಗೌರವ ಸನ್ಮಾನ ಏರ್ಪಡಿಸಲಾಗಿದೆ.
ಈ ಸಮಾರಂಭಕ್ಕೆ ಸ್ಥಳೀಯ ಎಲ್ಲಾ ಸಂಘಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು ಸರಿಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆಯಿದೆ.
ಡಿ. 9ನೇ ಶುಕ್ರವಾರ ಸಂಜೆ 4 ಗಂಟೆಗೆ ಮಕ್ಕಳ ಮೇಳ ಆಯೋಜಿಸಲಾಗಿದ್ದು, ರಾತ್ರಿ 7 ಗಂಟೆಗೆ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿಯವರಿಂದ ‘ನಗೆ ಹಬ್ಬ’ಆಯೋಜಿಸಲಾಗಿದೆ. ಹಾಗೂ ರಾತ್ರಿ ಹತ್ತು ಗಂಟೆಯಿಂದ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಕ್ಷೇತ್ರ ಕಮಲಶಿಲೆ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಡಿ. 10 ರ ಶನಿವಾರ ಸಂಜೆ 5 ಗಂಟೆಗೆ ಜಿ.ಆರ್.ಕೆ.ಮೂರ್ತಿ ನೆನಪಿನಂಗಳದಲ್ಲಿ ನೂರೊಂದು ನೆನಪು ಕಾರ್ಯಕ್ರಮದೊಂದಿಗೆ ಪ್ರೋ. ಕೃಷ್ಣೇಗೌಡ, ಸುಧಾ ಬರಗೂರುರವರ ‘ಹಾಸ್ಯಸಂಜೆ’ ಹಾಗೂ ಪ್ರಹ್ಲಾದ್ ಆಚಾರ್ಯರವರಿಂದ ಪರದೆಯ ಮೇಲೆ ‘ನೆರಳು-ಬೆರಳು’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದರು.
ಈ ಸಂಧರ್ಭದಲ್ಲಿ ಟ್ರಸ್ಟ್ ನ ಮುಖ್ಯಸ್ಥ ಜಿ ಆರ್ ಗೋಪಾಲಕೃಷ್ಣ
, ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಆನಂದ, ಮುಖಂಡರಾದ ಫ್ಯಾನ್ಸಿ ರಮೇಶ, ಕೆರೆಹಳ್ಳಿ ರವೀಂದ್ರ, ಉಲ್ಲಾಸ ತೆಂಕೋಲು ಗೋಷ್ಠಿಯಲ್ಲಿದ್ದರು.
“ಸರ್ಕಾರಿ ನೌಕರರಿಗೆ,ಆಶಾ,ಅಂಗನವಾಡಿ ಕಾರ್ಯಕರ್ತೆಯರೆಲ್ಲಾರಿಗೂ ಸನ್ಮಾನಿಸುವ ಮೂಲಕ ಜಿ ಆರ್ ಕೆ ಟ್ರಸ್ಟ್ ರಾಜ್ಯದ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ.ಪಕ್ಷಾತೀತವಾಗಿ ಈ ಕಾರ್ಯಕ್ರಮ ನಡೆಯುತ್ತದೆ.ಇಂತಹ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಎಲ್ಲಾರು ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ” – ಅರ್ ಎ ಚಾಬುಸಾಬ್
“ಜಿಆರ್ ಕೆ ಮೂರ್ತಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ನೆನಪಿನಂಗಳದಲ್ಲಿ ನೂರೊಂದು ನೆನಪು ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ನಮ್ಮ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ ಸಂಪೂರ್ಣ ಸಹಕಾರ ನೀಡುತ್ತದೆ” – ಆನಂದ್ ಮೆಣಸೆ, ಅಧ್ಯಕ್ಷರು ಕಸ್ತೂರಿ ಕನ್ನಡ ಸಂಘ