ಶಿವಮೊಗ್ಗ : ನಗರದ ಉಷಾ ನರ್ಸಿಂಗ್ ಹೋಂ ಬಳಿಯ ಸವಳಂಗ ರಸ್ತೆ ರೈಲ್ವೆಗೇಟ್ ಬಳಿ ವ್ಯಕ್ತಿಯೋರ್ವನ ಮೇಲೆ ರೈಲು ಹರಿದು ಕಾಲು ತುಂಡಾಗಿರುವ ಘಟನೆ ರಾತ್ರಿ ನಡೆದಿದೆ. ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ನಡೆಸುತ್ತಿದ್ದ ಸದ್ಪತಿ ಪಂಜಿ ಎಂಬ ಸುಮಾರು 30 ವರ್ಷದ ವ್ಯಕ್ತಿಯ ಮೇಲೆ ತಾಳಗುಪ್ಪ-ಬೆಂಗಳೂರು(1628) ರೈಲು ಹರಿದುಹೋಗಿದೆ.
ಸ್ಥಳೀಯರ ಪ್ರಕಾರ ಆತ ಕುಡಿದು ರೈಲ್ವೆ ಟ್ರ್ಯಾಕ್ ಬಳಿ ಮಲಗಿದ್ದ ಕಾರಣ ವ್ಯಕ್ತಿಯ ಕಾಲಿನ ಮೇಲೆ ರೈಲು ಹರಿದಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಮಾಹಿತಿ ಪ್ರಕಾರ ಮೂತ್ರ ವಿಸರ್ಜನೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಓಡಿಶಾ ರಾಜ್ಯದ ವ್ಯಕ್ತಿ ಎಂದು ತಿಳಿದುಬಂದಿದೆ. ಆತ ಕುಡಿದು ಮೂತ್ರ ವಿಸರ್ಜನೆಗೆ ಬಂದಿದ್ದನಾ ಅಥವಾ ಕುಡಿದು ಟ್ರಾಕ್ ಬಳಿ ಮಲಗಿದ್ದನಾ? ಆತ್ಮಹತ್ಯೆಗೆ ಮುಂದಾಗಿದ್ದನಾ ಎಂಬುದು ತನಿಖೆಯಲ್ಲಿ ತಿಳಿದು ಬರಬೇಕಿದೆ.
ಸದ್ಯಕ್ಕೆ ಆತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಸಹಾಯದಿಂದ ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಜರುಗಿಸಿದ್ದಾರೆ.