ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಜನಪ್ರತಿನಿಧಿಗಳು ಪ್ರತಿ ವರ್ಷ ಸರ್ಕಾರದಿಂದ ಕೋಟಿಗಟ್ಟಲೆ ಹಣ ತಂದು ತಾಲೂಕಿನ ವಿವಿಧ ಭಾಗದ ರಸ್ತೆಗಳ ಡಾಂಬರೀಕರಣ ಮಾಡುತ್ತಿದ್ದರೂ ಸರಿಯಾದ ಮೇಲ್ವಿಚಾರಣೆ ಇಲ್ಲದೆಯೋ ಅಥವಾ 40% ಕಮೀಷನ್ ದಂಧೆಯೋ ಏನೋ ಗೊತ್ತಿಲ್ಲ ತಾಲೂಕಿನ ಅಭಿವೃದ್ಧಿ ದಶಕಗಳ ಹಿಂದೆ ಹೋಗಿದೆಯೇನೋ ಎನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಹೌದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು – ಮಾವಿನಸರ ರಸ್ತೆ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಡಾಂಬಾರು ಕಾಣದೇ ಬಹಳ ವರ್ಷಗಳೇ ಕಳೆದಿತ್ತು. ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಿಂದ ಕೊನೆಗೂ ರಸ್ತೆ ಅಭಿವೃದ್ಧಿಗೆ ನಾಲ್ಕೂವರೆ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು.. ಆದರಂತೆ ರಸ್ತೆ ಕೂಡ ನಿರ್ಮಾಣವಾಯಿತು.ಅದ್ದೂರಿ ಉದ್ಘಾಟನೆಯೂ ನಡೆಯಿತು.
ಆದರೆ ಈಗ ಆ ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರೋ ರಸ್ತೆಯ ಕಳಪೆ ಕಾಮಗಾರಿ ನೋಡಿ ಶಾಕ್ ಆಗಿದ್ದಾರೆ. ಹೊಸ ರಸ್ತೆ ಸಿದ್ಧ ಆಯ್ತು ಇನ್ಮೆಲೆ ನೆಮ್ಮದಿಯಾಗಿ ಓಡಾಡ್ಬಹುದು ಅಂತ ನಿಟ್ಟುಸಿರು ಬಿಟ್ಟಿದ್ರು ಜನ. ಆದ್ರೆ ರಸ್ತೆ ಕಾಮಗಾರಿ ಮುಗಿದು ಮೂರು ತಿಂಗಳು ಕಳೆದಿರಲಿಲ್ಲ. ಈಗ ಊರಿನ ಜನರೇ ಶಾಕ್ ಗೆ ಒಳಗಾಗಿದ್ದಾರೆ ಯಾಕಂದ್ರೆ ಹೊಳೆಯುತ್ತಿದ್ದ ಚಿನ್ನದ ರಸ್ತೆಯ ಬಣ್ಣ ಬಟಾ ಬಯಲಾಗಿದೆ.
ನಾಲ್ಕೂವರೆ ಕೋಟಿ ಖರ್ಚು ಮಾಡಿದ್ರೂ ಸರಿಯಾದ ಮಟ್ಟದಲ್ಲಿ ಕೆಲಸ ಮಾಡದೇ ಕಳಪೆ ಕಾಮಗಾರಿ ನಿರ್ವಹಿಸಿರುವ ಹಿನ್ನಲೆಯಲ್ಲಿ ರಸ್ತೆಗೆ ಹಾಕಿದ ಡಾಂಬಾರು ಚಾಪೆಯಂತೆ ಎದ್ದೇಳುತ್ತಿದೆ. ಇದನ್ನು ಕಂಡು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಮಾವಿನಸರ – ಗವಟೂರು – ರಿಪ್ಪನ್‌ಪೇಟೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು. ಈ ಭಾಗದ ಜನ ಹಲವು ವರ್ಷಗಳಿಂದ ತಮಗೊಂದು ರಸ್ತೆ ಮಾಡ್ಕೊಡಿ ಅಂತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ರು.ಅದರಂತೆ ಇದೀಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ 5.16 ಕಿಲೋ ಮೀಟರ್ ರಸ್ತೆ ಅಭಿವೃದ್ದಿಪಡಿಸಲಾಗಿತ್ತು.ಈಗ ರಸ್ತೆಯು ಚಾಪೆಯಂತೆ ಕಿತ್ತು ಬರುತ್ತಿರುವುದರಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಕೂಡಲೇ ರಸ್ತೆ ಪುನರ್ ನಿರ್ಮಾಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎನ್ನುತ್ತಾರೆ.
ಸರ್ಕಾರದ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಕಿತ್ತು ಬರುತ್ತಿರುವುದು ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.ಈ ರಸ್ತೆ ಕಾಮಗಾರಿಯಲ್ಲಿ 40 ಪರ್ಸೆಂಟೇಜ್ ಅಲ್ಲಾ 80 % ಕಮೀಷನ್ ಹೋಗಿರಬಹುದು ಎಂದು ಗ್ರಾಪಂ ಸದಸ್ಯ ಗಣಪತಿ ಆರೋಪಿಸುತ್ತಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇