ಕೋಣಂದೂರು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕನಸು ನಿರ್ಮಾಣಗೊಳ್ಳಲು ಪ್ರಾಯೋಗಿಕ ತರಗತಿಗಳು ಸಹಕಾರಿ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿನ ಸಮೀಪದ ಗುಡ್ಡೇಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರಿನ ಯುವಿಪೆಪ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ 45 ದಿನಗಳ ಕಾಲ ಆಯೋಜಿಸಿದ್ದ ಆಧುನಿಕ ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಪ್ರಾಯೋಗಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಯನ್ನು ಆಯ್ದುಕೊಂಡು ,ಆ ಮಕ್ಕಳಲ್ಲಿ ವಿಜ್ಞಾನದ ಅರಿವನ್ನು ಮೂಡಿಸಿ ಭವಿಷ್ಯದ ಆವಿಷ್ಕಾರಕ್ಕೆ ಅಣಿಗೊಳಿಸುವ ಕೆಲಸ ಈ ಕಾರ್ಯಾಗಾರದಿಂದ ಆಗಿದೆ. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಕೇವಲ 45 ದಿನಗಳಲ್ಲಿ ಅದ್ಭುತ ಚಿಂತನೆಯನ್ನು ಸೃಷ್ಟಿಸಿ ಭವಿಷ್ಯದ ವಿಜ್ಞಾನಿಗಳಾಗಿಸಲು ಇಂತಹ ಕಾರ್ಯಾಗಾರಗಳು ಎಲ್ಲಾ ಶಾಲೆಗಳಲ್ಲೂ ಆಗಬೇಕು. ಕೆಲವೇ ದಿನಗಳಲ್ಲಿ ಮಕ್ಕಳಲ್ಲಿ ಆದ ಪರಿವರ್ತನೆ ನಿಜವಾಗಿಯೂ ನನಗೆ ಆಶ್ಚರ್ಯ ಮೂಡಿಸಿದೆ. ರಾಜ್ಯಾದ್ಯಂತ ವಿಜ್ಞಾನದ ಅರಿವನ್ನು ವಿಸ್ತರಿಸಲು ಯುವಿಪೆಪ್ ಪ್ರಯತ್ನಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿ ಹಾಗೂ ಕಾರ್ಯಕ್ರಮದ ರೂವಾರಿ ಕೋಣಂದೂರು ಪ್ರಕಾಶ್ ಮಾತನಾಡಿ ಕೇವಲ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುತ್ತಿದ್ದ ವೈಜ್ಞಾನಿಕ ಆವಿಷ್ಕಾರಗಳ ತರಬೇತಿ ಕಾರ್ಯಗಾರ ಹಳ್ಳಿ ಮಕ್ಕಳಿಗೆ ತಲುಪಿಸುವಲ್ಲಿ ಯುವಿಪೆಪ್ ಸಂಸ್ಥೆ ಯಶಸ್ವಿಯಾಗಿದ್ದು ಇಂತಹ ಸಮಾಜಮುಖಿ ಕಾರ್ಯದಲ್ಲಿ ನಾನು ಪಾಲ್ಗೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಕರ್ನಾಟಕದ ಮುಖ್ಯಸ್ಥೆ ಬೆಂಗಳೂರಿನ ಯುವಿಪೆಪ್ ನ ಸುಧಾರಾಣಿ ಮಾತನಾಡಿ, ನೈಜ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿ. ಅಬ್ದುಲ್ ಕಲಾಂ, ಬಿಲ್ ಗೇಟ್ಸ್ ,ಹೆಲೆನ್ ಮಾಸ್ಕ್ಅಂತವರ ರೀತಿ ಭವಿಷ್ಯದ ಮಕ್ಕಳನ್ನು ರೂಪುಗೊಳಿಸುವ ಉದ್ದೇಶ ನಮ್ಮದು. ಭೌತಶಾಸ್ತ್ರ, ಗಣಿತ, ವಿಜ್ಞಾನ ಆಧಾರಿತ ಕಲಿಕೆಗೆ ಇದಾಗಿರುತ್ತದೆ. ವಿದ್ಯಾರ್ಥಿಗಳಿಂದ 45 ದಿನದಲ್ಲಿ 22 ಯೋಜನಾ ಕಾರ್ಯಗಳನ್ನು ಸಿದ್ಧಪಡಿಸಿ, ವೀಕ್ಷಣೆಗೆ ಇಡಲಾಗಿದೆ. ಇದರಿಂದ ಸುತ್ತ ಮುತ್ತಲಿನ ಶಾಲೆಯ ವಿದ್ಯಾರ್ಥಿಗಳು ಸಹ ಪ್ರೇರಣೆ ಪಡೆದಿದ್ದಾರೆ ಎಂದರು.
‘45 ದಿನ ನಡೆದ ಕಾರ್ಯಾಗಾರದಲ್ಲಿ ಸೆನ್ಸಾರ್ , ಕೋಡಿಂಗ್ ಗಳ ಬಗ್ಗೆ ಮಾಹಿತಿ ಸಿಕ್ಕಿತು. ಭವಿಷ್ಯದಲ್ಲಿ ತಂತ್ರಜ್ಞಾನದ ಸಹಾಯದಿಂದ ನಾವೇ ಆವಿಷ್ಕಾರಗಳನ್ನು ಮಾಡುವುದನ್ನು ಕಲಿತೆವು.ಇದರಿಂದ ಭೌತಶಾಸ್ತ್ರ, ಗಣಿತ , ವಿಜ್ಞಾನ ಕಲಿಕೆಗೆ ಸಹಾಯಕ ವಾಗಿದೆ.ಅನೇಕ ಪ್ರಯೋಗಗಳು ಅತ್ಯಂತ ಖುಷಿ ಕೊಟ್ಟಿವೆ ’ಎಂದು ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವರುಣ್ ಪ್ರಭು ಹಾಗೂ 8ನೇ ತರಗತಿಯ ಸ್ವಾತಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದ ರೂವಾರಿ ಕೋಣಂದೂರು ಪ್ರಕಾಶ್ ರವರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಯುವಿಪೆಪ್ ಸಂಸ್ಥೆಯ ಭಾರತದ ಮುಖ್ಯಸ್ಥ ಅಜಿತ್ ಕುಮಾರ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೂರ್ಯಕಲಾ ರವಿ, ಉದ್ಯಮಿ ಕೋಣಂದೂರು ಕೆ.ಆರ್.ಪ್ರಕಾಶ್, ಯುವ ಮುಖಂಡ ಅರಗ ಅಭಿನಂದನ್ ,ಶೃತಿ ಅಭಿನಂದನ್ ,
ಸಾಲೇಕೊಪ್ಪ ರಾಮಚಂದ್ರ, ಟಿ.ಮಂಜುನಾಥ್,ಮುಖ್ಯ ಶಿಕ್ಷಕ ಗಣೇಶ್ ಮತ್ತು ಹಿರಿಯ ಶಿಕ್ಷಕ ಸ್ವಾಮಿ ಇದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇