ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಮಳವಳ್ಳಿ ಗಾಜಿನಗೋಡು ಗ್ರಾಮದ ಸಂಪರ್ಕ ರಸ್ತೆಯು ಇತ್ತೀಚೆಗೆ ಬಂದ ಅಕಾಲಿಕ ಭಾರಿ ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿ ಅಳದ ಬೃಹತ್ ಹೊಂಡ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಈ ರಸ್ತೆಯ ಮಾರ್ಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಮತ್ತು ಕೃಷಿ ಚಟುವಟಿಕೆಗಾಗಿ ಓಡಾಡುವ ಸಂಪರ್ಕ ರಸ್ತೆಯಾಗಿದ್ದು ಭಾರಿ ಮಳೆಯಿಂದಾಗಿ ಗುಡ್ಡದ ನೀರು ಏಕಾಏಕಿ ನುಗ್ಗಿ ಚರಂಡಿ ತುಂಬಿ ಉಕ್ಕಿ ಹರಿದ ಪರಿಣಾಮ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಓಡಾಡಕ್ಕೆ ತುಂಬಾ ಅನಾನುಕೂಲವಾಗಿದೆ.
ಕ್ಷೇತ್ರದ ಶಾಸಕರು ಮತ್ತು ಇನ್ನಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ ವಹಿಸಿದ್ದಾರೆಂದು ಹಾರಂಬಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ಹೊಂಡ ಬಿದ್ದಿರುವ ಕಾರಣ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಕೊಂಕಣ ಸುತ್ತಿಕೊಂಡು ಮೂಗುಡ್ತಿ ಮಾರ್ಗವಾಗಿ ರಿಪ್ಪನ್‌ಪೇಟೆ,ತಾಲ್ಲೂಕ್ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವಂತಾಗಿದೆ.ಅನಾರೋಗ್ಯಕ್ಕೆ ಮತ್ತು ಇನ್ನಿತರ ತುರ್ತು ಕಾರ್ಯಗಳಿಗೆ ಹೋಗಿ ಬರಲು ತುಂಬಾ ಕಷ್ಟವಾಗಿದೆ ಅಲ್ಲದೆ ಈ ಬಗ್ಗೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನಕ್ಕೆ ತರಲಾದರೂ ಕೂಡಾ ಈ ವರೆಗೂ ಯಾರು ಇತ್ತ ಸುಳಿದಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿ ಚುನಾವಣೆ ಬರಲಿ ಆ ಸಂಧರ್ಭದಲ್ಲಿ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡುತಿದ್ದಾರೆ.