ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗವಿರುವ ಅಕೇಶಿಯ ಮರ ಬೀಳುವ ಆತಂಕದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನದೂಡುತಿದ್ದಾರೆ.
ಇಲ್ಲಿನ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಬೆಳೆದುನಿಂತ ಅಕೇಶಿಯ ನೆಡುತೋಪು ಇದ್ದು ಈ ಮರಗಳ ರೆಂಬೆಕೊಂಬೆಗಳು ಶಾಲೆಯ ಮೇಲ್ಛಾವಣಿಗೆ ಬಾಗಿ ನಿಂತಿವೆ. ಮಲೆನಾಡಿನ ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗಾಳಿಯಿಂದ ಜನ ತತ್ತರಗೊಂಡಿದ್ದು ಇದೀಗ ಯಾವ ಗಳಿಗೆಯಲ್ಲಾದರೂ ಶಾಲೆಯ ಮೇಲೆ ಮರ ಬೀಳಬಹುದೆಂಬ ಆತಂಕ ಪೋಷಕರನ್ನು ಕಾಡುತ್ತಿದೆ.ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
 ಈ ಕುರಿತು ಎಸ್ ಡಿಎಂಸಿಯವರು ತಿಂಗಳ ಹಿಂದೆಯೇ ತುರ್ತು ಸಭೆ ಕರೆದು ಮರ ಕಟಾವು ಮಾಡಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು ಸ್ಥಳೀಯ ಗ್ರಾಮಾಡಳಿತ ಅರಣ್ಯ ಇಲಾಖೆಗೆ ಶಾಲಾ ಸ್ಥಳ ಪರಿಶೀಲಿಸಿ ಮರ ಕಟಾವು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.ಇದುವರೆಗೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ತಾಳಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಶಿಕ್ಷಕರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಮರಳಿ ಬರುವ ತನಕ ಆತಂಕದಲ್ಲಿ ದಿನದೂಡುತ್ತಿದ್ದಾರೆ ಅನಾಹುತ ಸಂಭವಿಸಿ ಶಾಲೆಯ ಮೇಲೆ ಮರ ಬಿದ್ದು ಅನಾಹುತ ಸಂಭವಿಸುವ ಲ್ಲಿ ಅರಣ್ಯ ಇಲಾಖೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.
 
                         
                         
                         
                         
                         
                         
                         
                         
                         
                        

