ರಿಪ್ಪನ್‌ಪೇಟೆ : ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ, ಹೆಣ್ಣು ಮಕ್ಕಳು ಮನಸ್ಸು ಮಾಡಿ ನಿಂತರೆ ಸಾಕು ಸಶಕ್ತವಾದ ಸಧೃಡ ಸ್ವಾಭಿಮಾನಿ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದಾಗಿದೆ ಎಂದು ಜೆಸಿಐ ಅಧ್ಯಕ್ಷೆ ಸೀಮಾ ಕಿರಣ್ ಹೇಳಿದರು
ಅವರು ಪಟ್ಟಣದ ಶ್ರೀ ರಾಮ ಸಭಾ ಭವನ ಮಹಿಳೆಯರು ನೂತನವಾಗಿ ಆರಂಭಿಸಿದ ಹೊಸನಗರ ತಾಲೂಕ್ ರೈಸ್ ಅಂಡ್ ಶೈನ್ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮನೆ, ಕುಟುಂಬ ಸೇರಿದಂತೆ ಇಡೀ ಸಮಾಜವನ್ನು ಸಶಕ್ತವಾಗಿ ಸದೃಡವಾಗಿ ಮುನ್ನಡೆಸುವ ಶಕ್ತಿಯು ಹೆಣ್ಣು ಮಕ್ಕಳಿಗಿದೆ. ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲೀಕರಣ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿಸಮನಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು. ಹೆಣ್ಣುನ ಮಕ್ಕಳು ಮನಸ್ಸು ಮಾಡಿ ನಿಂತರೆ ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬ ಬಗ್ಗೆ ಧೃಡವಾದ ನಂಬಿಕೆ ಹೊಂದಿರಬೇಕು. ತಂದೆ-ತಾಯಿಗಳೂ ಕೂಡ ಹೆಣ್ಣು ಮಕ್ಕಳನ್ನು ಅಗೌರವದಿಂದ ಕಾಣದೇ ಆತ್ಮವಿಶ್ವಾಸವನ್ನು ತುಂಬಿ ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದರು.
ನಂತರ ಮಾತನಾಡಿದ ರೈಸ್ ಅಂಡ್ ಶೈನ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಶಶಿ ಸುರೇಶ್ ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹೆಣ್ಣು ಮಕ್ಕಳನ್ನು ಸುಂದರವಾಗಿ ಕಾಣುವಂತೆ ಸಿಂಗರಿಸಿ ಅಲಂಕಾರ ಮಾಡುವ ಬ್ಯೂಟೀಷಿಯನ್ ಹುದ್ದೆಗೆ ಸಮಾಜದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿಕೌಶಲ್ಯದ ಮೂಲಕ ಅತ್ಯುತ್ತಮವಾದ ಬ್ಯೂಟೀಷಿಯನ್‌ಗಳಾಗಿ ಹೊರಹೊಮ್ಮುವ ಜೊತೆಗೆ ನಾಡನ್ನು ಸಮರ್ಥವಾಗಿ ಮುನ್ನಡೆಸುವ ಆದರ್ಶ ನಾರಿಯರಾಗಿ ಬದಲಾಗಬೇಕು. ಇಂದು ಸಮಾಜವನ್ನು ಮುನ್ನಡೆಸುವ ಧೀಶಕ್ತಿಯಾಗಿ ಮಹಿಳೆಯರು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಮನವಿ ಮಾಡಿದರಲ್ಲದೇ ಹೆಣ್ಣು ಮಕ್ಕಳು ಲಕ್ಷೀ-ಸರಸ್ವತಿಯರಂತೆ ಸಂಪೂರ್ಣವಾದ ಜ್ಞಾನವಂತರಾಗಿ ಸಮಾಜದ ಮುನ್ನಡೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಡನಂಬಿಕೆಗಳ ನಿರ್ಮೂಲನೆಗೆ ಸಮರ ಸಾರಬೇಕು ಎಂದು ಕರೆ ನೀಡಿದರು.
ಲೈಸನ್ಸ್ ಇಲ್ಲದೆ ಮನೆಯಲ್ಲಿ ಪಾರ್ಲರ್ ಕೆಲಸವನ್ನು ಮಾಡುತ್ತಿರುವವರ ಸಂಪರ್ಕ ಸಾದಿಸಿ ಹೊರ ಊರಿನಿಂದ ಬಂದ ಕೆಲವರು ಬ್ಯೂಟಿಷನ್ ಅಸೋಸಿಯೇಷನ್ ಗೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿ ಹಣ ಸಂಗ್ರಹಣೆ ಮಾಡುತ್ತಿದ್ದಾರೆ, ಲೈಸನ್ಸ್ ಇಲ್ಲದೆ ಯಾವುದೇ ಅಸೋಸಿಯೇಷನ್ನಿನ ಸದಸ್ಯರಾಗಲು ಸಾಧ್ಯವಾಗಿರುವುದಿಲ್ಲ, ಹೊಸನಗರ ತಾಲೂಕಿನ ಎಲ್ಲಾ ಬ್ಯೂಟಿಷನ್ ಗಳು ರೈಸ್ ಅಂಡ್ ಅಸೋಸಿಯೇಷನ್ ಗೆ ಸೇರಿಕೊಳ್ಳಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಿಪ್ಪನ್‌ಪೇಟೆ ಗ್ರಾಪಂ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ,ಹೊಸನಗರ ಪಪಂ ಉಪಾಧ್ಯಕ್ಷರಾದ ಕೃಷ್ಣವೇಣಿ,ಕಲ್ಪನಾ ಸತ್ಯನಾರಾಯಣ್,ರೈಜ್ ಅಂಡ್ ಶೈನ್ ಬ್ಯೂಟಿಷನ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಅನು ರಮೇಶ್,ಖಜಾಂಜಿ ಶೈಲಾ ರಿಪ್ಪನ್‌ಪೇಟೆ,ಗೌರವಾಧ್ಯಕ್ಷರಾದ, ಶಿಲ್ಪ ಸತೀಶ ಹೆಗ್ಡೆ ,ಸಂಘಟನಾ ಕಾರ್ಯದರ್ಶಿಗಳಾದ ತಾರ ಸುರೇಶ,ಸಲಹೆಗಾರರಾದ ರಮ್ಯಾ ಗರ್ತಿಕೆರೆ, ವನಿತಾ,ಚಂದ್ರಕಲಾ,ಆಶಾ ಕೋಣಂದೂರು,ಸೌಮ್ಯ ಕೋಣಂದೂರು ಹಾಗೂ ಇನ್ನಿತರರಿದ್ದರು.