ರಿಪ್ಪನ್‌ಪೇಟೆಯ ದ್ವಿಪಥ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಪಟ್ಟಣದ ಜನರ ಹಲವು ವರ್ಷಗಳ ಬೇಡಿಕೆ ದ್ವಿಪಥ ರಸ್ತೆಗೆ  ರಾಜ್ಯ ಸರ್ಕಾರ ಸ್ಪಂದನೆ ನೀಡಿದ್ದು ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ  ಚಾಲನೆ ನೀಡಲಾಗುವುದು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಿಂದ ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೆ ಹಾಗೂ ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶಬರೀಶನಗರದವರೆಗೂ ದ್ವಿಪಥ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸೆಪ್ಟೆಂಬರ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಪಟ್ಟಣದ ಸರ್ವಾಂಗೀಣ ಅಭಿವದ್ಧಿಯ ನಿಟ್ಟಿನಲ್ಲಿ ಅಂದಾಜು 6 ಕೋಟಿ ರೂ ವೆಚ್ಚದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೊಸನಗರ ಶಿವಮೊಗ್ಗ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲೇ ಪ್ರಥಮ ಬಾರಿಗೆ ವಿನೂತನ ಪ್ರಯೋಗ : ಬೆಳ್ಳೂರು ಗ್ರಾಪಂ ನಿರ್ವಹಣೆಯಲ್ಲಿ ಪಡಿತರ ವಿತರಣೆಗೆ ಚಾಲನೆ

ಬೆಳ್ಳೂರು : ರಾಜ್ಯದಲ್ಲೇ ಪ್ರಥಮವಾಗಿ ಗ್ರಾಮ ಪಂಚಾಯ್ತಿ ನಿರ್ವಹಣೆಯಲ್ಲಿ ಪಡಿತರ ಅಂಗಡಿಯನ್ನು ಆರಂಭಿಸಲಾಗಿದ್ದು ಇದು ಒಂದು ವಿನೂತನ ಪ್ರಯೋಗವಾಗಿದ್ದು ಇದರಿಂದಾಗಿ ಗ್ರಾಮಾಡಳಿತಕ್ಕೂ ಆದಾಯ ತರುವಂತಹ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಗ್ರಾಮಾಡಳಿತಗಳು ಇಂತಹ ಅಂಗಡಿಗಳನ್ನು ತೆರೆಯಲು ಪ್ರೇರಣೆಯಾಗಲಿ ಎಂದು ಕ್ಷೇತ್ರ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.


ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ಪಡಿತರ ಅಂಗಡಿಗೆ ಚಾಲನೆ ನೀಡಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕುಡಿಯುವ ನೀರು ರಸ್ತೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಕ್ಕೆ ಸರ್ಕಾರದಿಂದ 15 ಕೋಟಿ ರೂ. ಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿಯೊಂದು ಪಡಿತರ ಅಂಗಡಿಗಳನ್ನು ಆಯಾ ಗ್ರಾಮಾಡಳಿತವೆ ನಿರ್ವಹಿಸಿದಲ್ಲಿ ಜನಸಾಮಾನ್ಯರು ದೂರದೂರಿಗೆ ತೆರಳಿ ಪಡಿತರ ಖರೀದಿಸುವುದು ತಪ್ಪಿದಂತಾಗುವುದು. ಸ್ಥಳೀಯವಾಗಿ ಆಯಾ ಗ್ರಾಮ ಪಂಚಾಯ್ತಿಯಲ್ಲಿ ಇಂತಹ ಸೌಲಭ್ಯ ದೊರೆಯುವುದರಿಂದಾಗಿ ಫಲಾನುಭವಿಗಳಿಗೆ ಸಮಯ ಉಳಿತಾಯವಾಗುವುದರೊಂದಿಗೆ ನಿತ್ಯ ಕೂಲಿ ಕೃಷಿ ಚಟುವಟಿಕೆ ಮುಗಿಸಿಕೊಂಡು ಬಂದು ಖರೀದಿ ಮಾಡಲು ಸಹಕಾರಿಯಾಗುವುದೆಂದ ಅವರು, ಇದು ರಾಜ್ಯಕ್ಕೆ ಮಾದರಿಯಾಗುವಂತಾಗಲಿ ಎಂದರು.

ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಮಾತನಾಡಿ, ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೋಬೈಲು, ಮಸ್ಕಾನಿ, ಹಿರೇಸಾನಿ, ಬುಕ್ಕಿವರೆ, ಚಾಣಬೈಲು, ಕಳಸೆ, ಬೆಳ್ಳೂರು ಗ್ರಾಮಗಳ ಪಡಿತರದಾರರು ನ್ಯಾಯಬೆಲೆ ಅಂಗಡಿಗೆ ದೂರದ ತಳಲೆಗೆ ಬಂದು ಹೋಗಬೇಕಾಗಿತ್ತು ಅದನ್ನು ಶಾಸಕರ ಗಮನಕ್ಕೆ ತರುವುದರೊಂದಿಗೆ ರಾಜ್ಯ ಆಹಾರ ನಾಗರೀಕ ಪೂರೈಕೆ ಖಾತೆ ಸಚಿವ ಗೋಪಾಲಯ್ಯನವರ ಬಳಿ ಪ್ರಸ್ತಾಪಿಸಿ ತಕ್ಷಣ ಮಂಜೂರು ಮಾಡುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿ ಗ್ರಾಮ ಪಂಚಾಯ್ತಿಯಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ರಾಜ್ಯದಲ್ಲಿ ಇದೊಂದು ಮಾದರಿ ನ್ಯಾಯಬೆಲೆ ಅಂಗಡಿಯಾಗಿದೆ ಎಂದರು.


ಬೆಳ್ಳೂರು ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜೇಶ್ ಬುಕ್ಕಿವರೆ ಮಾತನಾಡಿ ಬೆಳ್ಳೂರು ಗ್ರಾಮದಲ್ಲಿ ನೂತನ ನ್ಯಾಯಬೆಲೆ ಅಂಗಡಿ ಪ್ರಾರಂಬಿಸುವಲ್ಲಿ ಶಾಸಕರ ಹಾಗೂ ವೀರೇಶ್ ಆಲುವಳ್ಳಿರವರ ಶ್ರಮ ಹೆಚ್ಚಿದ್ದು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಕಸವಿಲೇವಾರಿ ಘಟಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ವಿವಿಧ ಸಂಪರ್ಕ ರಸ್ತೆಗಳ ಶಂಕುಸ್ಥಾಪನೆ ಉದ್ಘಾಟನೆಯೊಂದಿಗೆ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೆಳ್ಳೂರು ಗ್ರಾಮ ಪಂಚಾಯಿತ್ ನಿಕಟ ಪೂರ್ವ ಅಧ್ಯಕ್ಷೆ ಭವಾನಿ ದಿವಾಕರ್, ಉಪಾಧ್ಯಕ್ಷ ರವೀಂದ್ರ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್,ಗ್ರಾಪಂ ಸದಸ್ಯರುಗಳಾದ ಬೆಳ್ಳೂರು ತಿಮ್ಮಪ್ಪ, ರಾಜೇಶ್ ಬುಕ್ಕಿವರೆ, ಉದ್ಯಮಿ ಎಲ್.ನಾಗರಾಜ್ ಶೆಟ್ಟಿ, ಆರ್.ಟಿ.ಗೋಪಾಲ, ಕೆ.ಬಿ.ಹೂವಪ್ಪ, ಎ.ಟಿ.ನಾಗರತ್ನ, ಕಾಳಾನಾಯ್ಕ್, ಪಿಡಿಓ ಪ್ರವೀಣ್ ಕುಮಾರ್, ತಾಲ್ಲೂಕ್ ಅಹಾರ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *