ಬಸವಾಪುರ : ರಸ್ತೆ ಅಗೆದು ಕೆರೆಯ ಕೋಡಿ ನೀರನ್ನು ಹರಿಯಬಿಟ್ಟ ಪ್ರಭಾವಿ ವ್ಯಕ್ತಿಗಳು,ಜೆಸಿಬಿ ತಡೆದು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾವಪುರ ಗ್ರಾಮದ ಸರ್ವೆ ನಂ 26 ರ  ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ಖಾಸಗಿ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುವ ಉದ್ದೇಶದಿಂದ ಸರ್ಕಾರಿ ರಸ್ತೆಯ ಮೇಲೆ ಜೆಸಿಬಿ ಮೂಲಕ ಕಾಲುವೆ ತೋಡಿ ನೀರನ್ನು ಹರಿಯಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.

 ಬಸಾವಪುರ ಗ್ರಾಮದ ಗುಂಡೂರು ಮೂಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ಕಾರಿ ರಸ್ತೆಯ ಮೇಲೆ ಖಾಸಗಿ ಪ್ರಭಾವಿ ವ್ಯಕ್ತಿಗಳು ಹಳ್ಳದಕಟ್ಟೆ ಕೆರೆಯ ಕೋಡಿ ನೀರನ್ನು ರಸ್ತೆಯ ಮೇಲೆ ಕಾಲುವೆ ತೋಡಿ ಹರಿಯ ಬಿಟ್ಟಿರುವ ಪರಿಣಾಮ ಸರ್ಕಾರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿ ರಸ್ತೆಯ ಪಕ್ಕದ ಎಡಬಲದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿದೆ. ಕುಣಬಿ ಮತ್ತು ಮಡಿವಾಳ ಜನಾಂಗದ ಸ್ಮಶಾನಕ್ಕೆ ಹೋಗುವ ಮಾರ್ಗವು ಇದಾಗಿದ್ದು ಇದೀಗ ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ. 

ಸರಕಾರಿ ರಸ್ತೆಯನ್ನು ಅಗೆದು ಸ್ವಾರ್ಥಕ್ಕಾಗಿ ಚರಂಡಿ ಮಾಡಿರುವ  ಕ್ರಮವನ್ನು ಖಂಡಿಸಿ ಜೆಸಿಬಿ ತಡೆದು ಬಸಾವಪುರ ಗ್ರಾಮಸ್ಥರುಗಳು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.


ಈ ಬಗ್ಗೆ ಅರಸಾಳು ಗ್ರಾಮ ಪಂಚಾಯತ್ ಪಿಡಿಒ ರವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಗ್ರಾಮಸ್ಥರು ಪ್ರತಿಭಟನೆಗೆ ಕುಳಿತಿದ್ದಾರೆ.

ಖಾಸಗಿ ಪ್ರಭಾವಿ ವ್ಯಕ್ತಿಗಳು ಸರಕಾರಿ ರಸ್ತೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ಸಂಬಂಧಪಟ್ಟ ಖಾಸಗಿ ವ್ಯಕ್ತಿಗಳು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಟಿ ಕೆ ಗಣಪತಿ ಮತ್ತು ಗ್ರಾಮಸ್ಥರಾದ ಪ್ರಶಾಂತ್, ಶ್ರೀನಿವಾಸ್, ಸುರೇಶ್, ರಮೇಶ್, ನಾಗರತ್ನ ರಾಘವೇಂದ್ರ ಹಾಗೂ  ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *