ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸತತ ಪರಿಶ್ರಮ, ನಿಖರ ಗುರಿ ಇದ್ದಲ್ಲಿ ಎಲ್ಲವೂ ಸಾಧ್ಯವೆಂದು ರಿಪ್ಪನ್ ಪೇಟೆಯ ಬರುವೆ ಗ್ರಾಮದ ಯುವತಿ ಹಾಕಿ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾಳೆ.
ರಿಪ್ಪನ್‌ಪೇಟೆ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ.
ಕುಮಾರಿ ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ.
ಮಧ್ಯ ಪ್ರದೇಶದ ಭೂಫಾಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಇಂದು ಹರಿಯಾಣ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತಲುಪಿದ್ದಾರೆ.ಈ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಕುಮಾರಿ ಪೂಜಿತ ಉತ್ತಮವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ನಾಳೆ ಒಡಿಸ್ಸಾ ತಂಡದ ವಿರುದ್ದ ಫೈನಲ್ ಪಂದ್ಯಾವಳಿ ನಡೆಯಲಿದೆ.
ರಿಪ್ಪನ್ ಪೇಟೆಯ ಬರುವೆ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಕಷ್ಟ ಸುಖ, ನೋವುಗಳನ್ನು ನೋಡಿ ಕೃಷಿ ಆಧರಿಸಿ ಜೀವನ ಸಾಗಿಸಿಕೊಂಡು ಬಂದಂತಹ ನಾಗೇಶ್ ಗೌಡ ಪತ್ನಿ ಪೂರ್ಣಿಮಾ ಈ ದಂಪತಿಗಳ ಮಗಳಾದ ಕುಮಾರಿ ಪೂಜಿತ ಇಂದು ರಾಷ್ಟ್ರಮಟ್ಟದಲ್ಲಿ ರಿಪ್ಪನ್ ಪೇಟೆಯ ಕೀರ್ತಿಪತಾಕೆಯನ್ನು ಕ್ರೀಡಾಲೋಕದಲ್ಲಿ ಹಾರಿಸುತ್ತಿದ್ದಾಳೆ..
ಹೆಚ್ಚು ಅನುಕೂಲಸ್ಥರು ಅಲ್ಲದಿದ್ದರು ತನ್ನ ಮಗಳು ಈ ನಾಡಿಗೆ ಏನಾದರೂ ತನ್ನದೇ ಆದ ಸೇವೆ ಸಲ್ಲಿಸಬೇಕು ಎಂಬ ತಂದೆ-ತಾಯಿಯರ ಕನಸನ್ನು ಇಂದು ಪೂಜಿತ ನನಸಾಗಿಸಿದ್ದಾಳೆ.
ಕುಮಾರಿ ಪೂಜಿತಾ ತನ್ನ ಬಾಲ್ಯದ ಜೀವನವನ್ನು ರಿಪ್ಪನ್ ಪೇಟೆಯ ಸರಕಾರಿ ಬಾಲಕಿಯರ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ ಮುಂದಿನ ವ್ಯಾಸಂಗಕ್ಕಾಗಿ ಶಿವಮೊಗ್ಗದ ಕ್ರೀಡಾ ಹಾಸ್ಟೆಲ್ ನಲ್ಲಿ 5 ನೇ ತರಗತಿ ಯಿಂದ ಏಳನೇ ತರಗತಿಯವರೆಗೆ ನಂತರ ಎಂಟರಿಂದ 10ನೇ ತರಗತಿ ಕ್ರೀಡಾ ಹಾಸ್ಟೆಲ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡಿ ಪದವಿಯನ್ನು ಥೆರೆಶಿಯನ್ ಕಾಲೇಜ್ ಮೈಸೂರಿನಲ್ಲಿ ಮುಗಿಸಿದ್ದಾರೆ.
ಈಕೆಯ ದೃಢ ಅಚಲ ಸ್ಪರ್ಧಾ ಮನೋಭಾವ ಹಾಗೂ ಈ ನಾಡಿಗೆ ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇಂದು ರಾಷ್ಟ್ರಮಟ್ಟದಲ್ಲಿ ಹಾಕಿ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ, ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡ ಈ ಪ್ರತಿಭೆಗೆ ನಿಜವಾಗಲೂ ಅಭಿನಂದನೆಗಳು.
ಕುಮಾರಿ ಪೂಜಿತಾ ರವರ ಸಾಧನೆಗೆ ಬರುವೆ ಗ್ರಾಮದ ಗ್ರಾಪಂ ಸದಸ್ಯರಾದ ಸುಧೀಂದ್ರ ಪೂಜಾರಿ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಕಡುಬಡತನದಲ್ಲಿ ಬೆಳೆದು ರಾಷ್ಟ್ರಮಟ್ಟದ ಆಟಗಾರ್ತಿಯಾದ ಪೂಜಿತ ರವರಿಗೆ ಹಾಗೂ ಅವರನ್ನು ಬೆಳೆಸಿ,ಬೆಂಬಲಿಸಿ,ಪ್ರೋತ್ಸಾಹಿಸಿದ ಅವರ ತಂದೆ ತಾಯಿಯವರಿಗೆ ಹಾಗೂ ತರಬೇತುದಾರರಿಗೆ ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್ ತಂಡದ ವತಿಯಿಂದ ಅಭಿನಂದನೆಗಳು ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ರಿಪ್ಪನ್ ಪೇಟೆಯ ಕೀರ್ತಿಪತಾಕೆಯನ್ನು ಇನ್ನಷ್ಟು ಬೆಳಗಿಸಲಿ ಎಂಬುದೇ ನಮ್ಮ ಅಶಯ.
ಪೂಜಿತಾಳ ಆಟದ ವೈಖರಿಯ ವೀಡಿಯೋ ಇಲ್ಲಿ ವೀಕ್ಷಿಸಿ👇👇👇