Headlines

ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಅಗರ್ ವುಡ್ ಬೆಳೆ ಸಹಕಾರಿ : ಶಂಕರಣ್ಣ

ಮಲೆನಾಡಿನಲ್ಲಿ ಅಡಿಕೆ ಕೃಷಿಯೇ ಪ್ರಧಾನ. ಹಲವು ತಲೆಮಾರುಗಳಿಂದಲೂ ಇಲ್ಲಿನ ಬಹುತೇಕ ಕೃಷಿಕರು ಅಡಿಕೆಯನ್ನೇ ಪ್ರಧಾನ ಬೆಳೆಯನ್ನಾಗಿ ನಂಬಿಕೊಂಡಿದ್ದಾರೆ.ನಿಟ್ಟಿನಲ್ಲಿ ಅಡಿಕೆ ರಬ್ಬರ್ ಕಾಳು ಮೆಣಸು ಮತ್ತು ಶುಂಠಿ ಹೀಗೆ ಹತ್ತು ಹಲವು ಬೆಳೆಗಳನ್ನು ಬೆಳೆಯುವುದು ಇತ್ತೀಚೆಗೆ ಅಗತ್ಯವಾಗಿದೆ ಅದರೊಂದಿಗೆ ತಮ್ಮ ಜಮೀನಿನಲ್ಲಿ ಅಗರ್‌ವುಡ್ ಬೆಳೆಯನ್ನು ಹಾಕುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇದೆ ಇದರಿಂದ ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗುವುದೆಂದು ಸಾಗರ ತಾಲ್ಲೂಕು ಅಗರ್‌ವುಡ್ ಪ್ರವರ್ತಕ ಶಂಕರಣ್ಣ ಅಭಿಪ್ರಾಯಪಟ್ಟರು.


ಇಲ್ಲಿನ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ ಜಯಪ್ರಕಾಶ್‌ರವರ ಅಗರ್‌ವುಡ್ ತೋಪಿನಲ್ಲಿ ವನದುರ್ಗಿ ಅಗರ್‌ವುಡ್ ಮರಗಳ ಕಟಾವು ಮತ್ತು ಸಂಸ್ಕರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಬೆಳೆಗೆ ಯಾವುದೇ ಸೌಲಭ್ಯಗಳಿಲ್ಲ, ಆದರೂ ರೈತರು ತಮ್ಮ ಜಮೀನಿನಲ್ಲಿ ಅಗರ್‌ವುಡ್ ಮರಗಳನ್ನು ಬೆಳೆಸುವುದರಿಂದ ಹೆಚ್ಚು ಲಾಭವಾಗುವುದು ಮರದ ಉತ್ಪನ್ನವನ್ನು ಮಾರಾಟ ಮಾಡುವುದು ಕಷ್ಟವಿಲ್ಲ. ಕಾರಣ ರೈತರು ತಮ್ಮ ಜಮೀನಿನಲ್ಲಿನ ಆರ್.ಟಿ.ಸಿ ಯಲ್ಲಿ ಬೆಳೆ ನಮೂದಾಗಿದ್ದರೆ ಕಂಪನಿಯವರು ನೇರವಾಗಿ ರೈತರ ಮನೆಗಳಿಗೆ ಭೇಟಿ ನೀಡಿ ಖರೀದಿಸುವ ವ್ಯವಸ್ಥೆಯಿದೆ. ಈ ಬೆಳೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸುವುದು ಅಲ್ಲದೆ ಉದ್ಯೋಗವನ್ನು ಅರಸಿ ವಿದ್ಯಾವಂತರು ರೈತಾಪಿ ವರ್ಗ ಹೆಚ್ಚು ಅಲೆದಾಡುವ ಬದಲು ಸ್ಥಳೀಯವಾಗಿ ಸ್ವಾಲಂಭಿ ಉದ್ಯೋಗ ಪಡೆಯಲು ಸಹಕಾರಿಯಾಗುವುದು ಎಂದ ಅವರು ಮಳೆಗಾಲದ ಮೂರು ತಿಂಗಳು ಕೆಲಸ ಮಾಡುವ ಅಗತ್ಯ ಇಲ್ಲ ಉಳಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಸಲು ಸಹಕಾರಿಯೆಂದರು.


ಈ ಕಾರ್ಯಾಗಾರದಲ್ಲಿ ಶಿವಮೊಗ್ಗ ,ಸಾಗರ ,ತೀರ್ಥಹಳ್ಳಿ, ಕೊಪ್ಪ,ಶೃಂಗೇರಿ ಸೇರಿದಂತೆ ಅನೇಕ ಭಾಗಗಳಿಂದ ರೈತರು ಆಗಮಿಸಿದ್ದರು.

ವನದುರ್ಗಿ ಅಗರ್‌ವುಡ್ ಮರಗಳ ಕಟಾವು ಮತ್ತು ಸಂಸ್ಕರಣೆ ಕಾರ್ಯಕ್ರಮವನ್ನು ರಿಪ್ಪನ್‌ಪೇಟೆ ಸಮೀಪದ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ ಜಯಪ್ರಕಾಶ್‌ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ತಾಲ್ಲೂಕು ಅಗರ್‌ವುಡ್ ಪ್ರವರ್ತಕ ಮಂಜುನಾಥಭಟ್, ವನದುರ್ಗಿ ಅಗರ್‌ವುಡ್ ಸಂಸ್ಥೆಯ ನಿರ್ದೇಶಕ ಧಮೇಂದ್ರ ಕುಮಾರ್,ಶೃಂಗೇರಿಯ ಸುಹಾಸ್ ಇನ್ನಿತರ ರೈತ ಸಮೂಹ ಉಪಸ್ಥಿತರಿದ್ದರು.




ಮಲೆನಾಡಿನಲ್ಲಿ ಅಗರ್ ವುಡ್ ಏಕೆ ಅಗತ್ಯ???

 ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆ, ರೋಗ ಭಾದೆ, ಇದೆಲ್ಲಾ ಸಂಕಷ್ಟಗಳ ಜೊತೆಗೆ ಇನ್ನೊಂದು ವಿಚಿತ್ರ ವಿಷಮ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರ ಸಿಲುಕಿಕೊಂಡಿದ್ದಾನೆ. ಅದೆಂದರೆ ಜಗತ್ತಿನಾದ್ಯಂತ ತಂಬಾಕು ಬಳಕೆಗೆ ಹೆಚ್ಚುತ್ತಿರುವ ವಿರೋಧ. ಅಡಿಕೆಗೆ ಇರುವ ಮಾರುಕಟ್ಟೆ ತಂಬಾಕಿನೊಂದಿಗೆ ತಳುಕು ಹಾಕಿಕೊಂಡಿರುವ ಕಾರಣ ತಂಬಾಕು ಬೆಳೆಗಾರರು ಕಷ್ಟಕ್ಕೆ ಸಿಲುಕಿಕೊಂಡಂತೆಯೇ ಅಡಿಕೆ ಬೆಳೆಗಾರ ಕೂಡಾ ಪರಿತಪಿಸುವಂತಾಗಿದೆ.

ಅಗರ್ ವುಡ್ ಎಂದರೇನು..????

ಅಗರ್ ವುಡ್ ಅಂತ ಕರೆಸಿಕೊಳ್ಳುವ ಮರ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಔಧ್ ಎಂಬ ಸುವಾಸನಾ ದ್ರವ್ಯಕ್ಕೆ ಬಳಕೆಯಾಗುವಂಥದ್ದು, ಇದರ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖವಿರುವುದು ನಮ್ಮ ವೇದಗಳಲ್ಲೇ. ಹಾಗಾಗಿ ಸಾವಿರಾರು ವರ್ಷಗಳ ಹಿಂದೆಯೇ ಇದರ ಉಪಯೋಗ ಭಾರತೀಯರಿಗೆ ತಿಳಿದಿತ್ತು. ಸಂಸ್ಕೃತದಲ್ಲಿ ಇದನ್ನು ಅಗುರು ಅನ್ನುವ ಹೆಸರಿನಿಂದ ಕರೆಯುತ್ತಾರೆ. ಕನ್ನಡದಲ್ಲೂ ಅದೇ ಹೆಸರು ಬಳಕೆಯಲ್ಲಿದೆ. ಆಕ್ವಿಲೇರಿಯಾ ಅಂತ ವೈಜ್ಞಾನಿಕವಾಗಿ ಕರೆಯಲ್ಪಡುವ ಒಂದು ಸಸ್ಯಪ್ರಭೇಧವೇ ಈ ಅಗರ್ ವುಡ್. ಮಳೆಕಾಡುಗಳಲ್ಲಿ ಬೆಳೆಯುವ ಈ ಮರದಲ್ಲಿ ಸುಮಾರು ಹದಿನೇಳು ಉಪಜಾತಿಗಳಿವೆ.

ಈ ಮರಗಳಿಗೆ ಒಂದು ರೀತಿಯ ಶಿಲೀಂದ್ರ (ಫಂಗಸ್) ಸೋಂಕು ಉಂಟಾಗಿ ಈ ಮರಗಳ ತಿರುಳಿನ ಭಾಗದಲ್ಲಿ ದಟ್ಟ ಕಂದು – ಕಪ್ಪು ಬಣ್ಣದ ಅಂಟು ಸ್ರವಿಸುತ್ತದೆ ಮತ್ತು ಕೆಲ ವರ್ಷಗಳಲ್ಲಿ ಮರದ ತಿರುಳು ಗಟ್ಟಿಯಾಗಿ ಕಡು ಕಂದುಬಣ್ಣಕ್ಕೆ ತಿರುಗುತ್ತದೆ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು ಇದನ್ನು ಉರಿಸಿದರೆ ಆಹ್ಲಾದಕರವಾದ ಪರಿಮಳ ಬರುತ್ತದೆ. ಇದರಿಂದ ತೈಲವನ್ನೂ ತಯಾರಿಸಲಾಗುತ್ತದೆ. ಹಾಗಾಗಿ ಇದಕ್ಕೆ ಜಾಗತಿಕವಾಗಿ ಬಹಳಷ್ಟು ಬೇಡಿಕೆ ಮತ್ತು ಬಹಳ ಬೆಲೆಯೂ ಇದೆ. ಹೆಚ್ಚಾಗಿ ಯುರೋಪ್ ಮತ್ತು ಅರಬ್ ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಸುಗಂಧ ದ್ರವ್ಯ ತಯಾರಿಕಾ ಕೈಗಾರಿಕೆಗಳೂ ಇದನ್ನು ಬಳಸಿಕೊಂಡು ಅತ್ಯುಕೃಷ್ಟವಾದ ಸುಗಂಧವನ್ನು ತಯಾರಿಸುತ್ತದೆ. ಫ್ರಾನ್ಸ್ ದೇಶದ ಖ್ಯಾತ ಪರ್ಫ್ಯೂಮ್ ಕಂಪೆನಿಗಳು ಔಧ್ ಹೆಸರಿನ ಅತ್ಯುಕೃಷ್ಟ ಮತ್ತು ಅತಿ ಬೆಲೆಬಾಳುವ ಸುಗಂಧವನ್ನು ತಯಾರಿಸುತ್ತವೇ. ಹೀಗಾಗಿ ಅಗರ್ ವುಡ್ ಗೆ ಜಾಗತಿಕವಾಗಿ ಒಳ್ಳೆಯ ಬೇಡಿಕೆ ಮತ್ತು ಬೆಲೆ ಎರಡೂ ಇದೆ.

ಮಾಮೂಲಿಯಾಗಿ ದಟ್ಟ ಮಳೆಕಾಡುಗಳಲ್ಲಿ ಬೆಳೆಯುವ ಆಕ್ವಿಲೇರಿಯಾ ಪ್ರಭೇದದ ಹಲವಾರು ಉಪಜಾತಿಯ ಮರಗಳಿಗೆ ಒಂದು ನಿರ್ದಿಷ್ಟ ಶಿಲೀಂಧ್ರ ಸೋಂಕು ಉಂಟಾಗಿ ಆ ಮರದ ತಿರುಳಿನಲ್ಲಿ ಅಗರ್ ವುಡ್ ಉತ್ಪತ್ತಿಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಆಕ್ವಿಲೇರಿಯಾ ಜಾತಿಯ ಮರಗಳು ವಿನಾಶದ ಅಂಚಿನಲ್ಲಿದ್ದು ಕಾಡಿನಲ್ಲಿ ಸಹಜವಾಗಿ ಸಿಗುವ ಅಗರ್ ವುಡ್ ತೀರಾ ದುರ್ಲಭವಾಗಿದೆ.

ಹಾಗಾಗಿ ಅಗರ್ ವುಡ್ ನ ಕೃಷಿ ಶುರುವಾಯಿತು. ಆಕ್ವಿಲೇರಿಯಾ ಮರಗಳಲ್ಲಿ ಕೆಲವು ಉಪಜಾತಿಗಳನ್ನು ಗುರುತಿಸಿ ಅವುಗಳಿಗೆ ಶಿಲೀಂಧ್ರವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೃತಕವಾಗಿ ಸೋಂಕಿಗೊಳಪಡಿಸಲಾಗುತ್ತದೆ. ಹೀಗೆ ಶಿಲೀಂದ್ರ ಸೋಂಕಿಗೊಳಗಾದ ಮರಗಳ ತಿರುಳಿನಲ್ಲಿ ಆ ವಿಶಿಷ್ಟ ಪರಿಮಳದ ಅಂಟು ಉತ್ಪತ್ತಿಯಾಗಿ ಕೆಲ ವರ್ಷಗಳಲ್ಲಿ ಅದು ತಿರುಳಿನ ತುಂಬಾ ವ್ಯಾಪಿಸಿ ಗಟ್ಟಿಯಾಗುತ್ತದೆ. ಇದೇ ಅಗರ್ ವುಡ್. ಭಾರತದಲ್ಲಿ ಮೊದಲಿಗೆ ಅಸ್ಸಾಮ್ ನಲ್ಲಿ ಈ ರೀತಿ ಅಗರ್ ವುಡ್ ನ ಕೃತಕ ಕೃಷಿ ಪ್ರಾರಂಭವಾಯಿತು.

Leave a Reply

Your email address will not be published. Required fields are marked *