ಡ್ರಾಪ್ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ವಂಚಿಸಿ ಬೈಕ್ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಸಂಭವಿಸಿದೆ.
ಬಸ್ ಚಾಲಕ ವೃತ್ತಿ ಮಾಡುವ ರಮೇಶ್ ಸ್ನೇಹಿತನ ಬಜಾಜ್ ಪಲ್ಸರ್ ಬೈಕ್ ಪಡೆದುಕೊಂಡು, ಚೋರಡಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಸುಮಾರು 25 ವರ್ಷದ ಯುವಕನೊಬ್ಬ ಡ್ರಾಪ್ ಕೇಳಿದ್ದಾನೆ. ಅದೇ ಯುವಕ ರಮೇಶ್ ಅವರು ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಕದ್ದು ಪರಾರಿಯಾಗಿದ್ದಾನೆ.
ರಮೇಶ್ ಅವರು ಬಸ್ ಚಾಲಕ ವೃತ್ತಿ ಮಾಡುತ್ತಿದ್ದಾರೆ. ತುರ್ತು ಕೆಲಸ ಇದ್ದ ಕಾರಣ ಚೋರಡಿಯಿಂದ ತಮ್ಮ ಸಂಬಂಧಿಯೊಬ್ಬರ ಬೈಕ್ ಪಡೆದುಕೊಂಡು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಲಯನ್ ಸಫಾರಿ ಬಳಿ ಯುವಕನೊಬ್ಬ ರಮೇಶ್ ಅವರಿಗೆ ಡ್ರಾಪ್ ಕೇಳಿದ್ದಾನೆ.ತಾನು ಕೋರ್ಟ್’ಗೆ ಹೋಗಬೇಕಿದೆ ಎಂದು ತಿಳಿಸಿದ್ದರಿಂದ ಯುವಕನನ್ನು ರಮೇಶ್ ಬೈಕ್’ಗೆ ಹತ್ತಿಸಿಕೊಂಡಿದ್ದಾರೆ. ಪಿಇಎಸ್ ಕಾಲೇಜು ಬಳಿ ಬರುತ್ತಿದ್ದಂತೆ ಫೋನ್ ಬಂದಿದೆ ಎಂದು ಹೇಳಿದ ಯುವಕ ಬೈಕಿನಿಂದ ಕೆಳಗಿಳಿದಿದ್ದಾನೆ. ಕೆಲ ನಿಮಿಷ ಫೋನಿನಲ್ಲಿ ಮಾತನಾಡಿ ಬಂದ ಯುವಕ ಪುನಃ ಬೈಕ್ ಹತ್ತಿದ್ದಾನೆ. ಸ್ವಲ್ಪ ದೂರ ಬರುತ್ತಿದ್ದಂತೆ ರಮೇಶ್ ಅವರಿಗೆ ಫೋನ್ ಕರೆ ಬಂದಿದೆ. ರಮೇಶ್ ಅವರು ಬೈಕಿನಿಂದ ಕೆಳಗಿಳಿದು ಮಾತನಾಡಲು ತೆರಳಿದ್ದಾರೆ.
ಕೀ ಬೈಕಿನಲ್ಲೆ ಬಿಟ್ಟಿದ್ದರಿಂದ ಯುವಕ ಬೈಕನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಈಗ ಡ್ರಾಪ್ ಕೇಳಿಕೊಂಡು ಬಂದವನು ಬೈಕ್ ಕಳ್ಳತನ ಮಾಡಿರುವ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರಮೇಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.