ರಿಪ್ಪನ್‌ಪೇಟೆ: ದಿ || ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಮತ್ತು ಮಲೆನಾಡು ಕಲಾ ತಂಡ ರಿಪ್ಪನ್‌ಪೇಟೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 13ರಿಂದ 15ದಿನಗಳ ಕಾಲ ರಿಪ್ಪನ್‌ಪೇಟೆಯ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ “ಹಳ್ಳಿ ಮಕ್ಕಳ ರಂಗ ಹಬ್ಬ” ರಂಗ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಮಲೆನಾಡು ಕಲಾ ತಂಡದ ಸಂಚಾಲಕ ಗಣೇಶ ಮಸರೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ರಂಗ ಹಬ್ಬದಲ್ಲಿ 9 ವರ್ಷದಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಈ ಶಿಬಿರದಲ್ಲಿ ನಾಟಕ, ನೃತ್ಯ, ಚಿತ್ರಕಲೆ, ಜಾನಪದಗೀತೆ ಗಾಯನ, ವೇದಿಕೆ ನಿರ್ವಹಣೆ, ಸಾಹಿತ್ಯ ಪರಿಚಯ, ರಂಗಗೀತೆ, ಕರಕುಶಲ ಕಲೆ, ಕಥೆ, ಕವನ, ಯೋಗ, ಗ್ರಾಮೀಣ ಕಲೆ, ಸಾಮಾಜಿಕ ಕಳಕಳಿ ಸೇರಿದಂತೆ ಇನ್ನು ವಿಸ್ಮಯಕಾರಿ ಕಲಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮಕ್ಕಳ ಕಿರುಚಿತ್ರ ಪ್ರದರ್ಶನ ಮತ್ತು ತರಬೇತಿ ಜೊತೆಗೆ ಶಿಬಿರದ ಕೊನೆಯ ದಿನ ಮಕ್ಕಳಿಂದ ಎರಡು ನಾಟಕ ಪ್ರದರ್ಶನ ಮಾಡಿಸಲಾಗುವುದು. ಈ ಶಿಬಿರಕ್ಕೆ ರಂಗಭೂಮಿಯ ಕಿರುತೆರೆ ನಿನಾಸಂ ಪದವೀಧರರು, ಅನುಭವಿ ನಿರ್ದೇಶಕರುಗಳು ಆಗಮಿಸಿ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.
ಈ ಶಿಬಿರದಲ್ಲಿ 30 ಜನರಿಗೆ ಅವಕಾಶ ಇದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿ ಶುಲ್ಕ 10 ರೂ. ಹಾಗೂ ಶಿಬಿರ ಶುಲ್ಕ 1000 ರೂ. ಆಗಿದ್ದು, ಹೆಚ್ಚಿನ ಮಾಹಿತಿಗೆ 9481691337, 9902356019, 988697305, 9480724592 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಳಕೋಡು ಹಾಲಸ್ವಾಮಿಗೌಡ್ರು, ಆರ್.ಡಿ.ಶೀಲಾ, ಎಸ್.ಡಿ.ಎಂ.ಸಿ.ಸದಸ್ಯ ಗಣೇಶನಾಯಕ ಇದ್ದರು.