ದೇಶದಲ್ಲಿ ಹಿಂದೂ ಮುಸ್ಲಿಂ ಇಬ್ಬರೂ ಸಹೋದರರಂತೆ ಬಾಳಬೇಕು ಎನ್ನುವುದು ಎಲ್ಲರ ಆಶಯ : ಶಾಸಕ ಹರತಾಳು ಹಾಲಪ್ಪ

ಸಾಗರ: ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ನೀವು ಪಾಕ್‌ಗೆ ಹೋಗಿ ಎನ್ನುವುದು ಅನಿವಾರ್ಯವಾಗುತ್ತದೆ. ಹಿಂದೂ ಮುಸ್ಲಿಂ ಇಬ್ಬರ ಬಾಂಧವ್ಯ ಬೆಸೆಯಬೇಕಾದರೆ ಭಾರತ ನಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳುವುದು ಅಗತ್ಯ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಹೇಳಿದ್ದಾರೆ.

ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಫಲಾನುಭವಿಗಳಿಗೆ ವಸತಿ ಕಾಮಗಾರಿ ಕಾರ್ಯಾದೇಶ ಮತ್ತು ಶೇ. 5 ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ಭದ್ರತಾ ಠೇವಣಿ ಬಾಂಡ್ ವಿತರಣೆ ಮಾಡಿ ಅವರು ಮಾತನಾಡಿದರು.


ಮೋದಿಯವರು ದೇಶದ ಸಮಗ್ರತೆಗಾಗಿ ಅಹರ್ನಿಶಿ ದುಡಿಯುತ್ತಿದ್ದರೂ ಕೆಲವರು ಪ್ರಶ್ನಿಸುತ್ತಲೇ ಇದ್ದಾರೆ. ದೇಶದಲ್ಲಿ ಹಿಂದೂ ಮುಸ್ಲಿಂ ಇಬ್ಬರೂ ಸಹೋದರರಂತೆ ಬಾಳಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ನಾವೆಲ್ಲಾ ಭಾರತಾಂಬೆಯ ಮಕ್ಕಳು. ಭಾರತ ದೇಶದಲ್ಲಿರುವ ಎಲ್ಲರೂ ಭಾರತ ಮಾತೆಗೆ ಜೈಕಾರ ಹಾಕಬೇಕು ಎಂದರು.

ರಾಜ್ಯದಲ್ಲಿ ಶೇ. 40 ಕಮಿಷನ್ ಜೋರಾಗಿ ಸದ್ದು ಮಾಡುತ್ತಿದೆ. ವಾಸ್ತವಾಂಶವೆಂದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ. 24ರಷ್ಟು ಬೇರೆಬೇರೆ ಉದ್ದೇಶಕ್ಕೆ ಸರ್ಕಾರ ಸೆಸ್ ರೂಪದಲ್ಲಿ ಕಡಿತ ಮಾಡುತ್ತದೆ. ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರ ಹೆಚ್ಚೆಂದರೆ ಶೇ. 10ರಷ್ಟು ಲಾಭ ಪಡೆಯುತ್ತಾನೆ. ಇದು ಜನಸಾಮಾನ್ಯರಿಗೆ ತಿಳಿದಿಲ್ಲ. ಇದರಿಂದಾಗಿ ಕಾಂಗ್ರೆಸ್‌ನವರು ಬಿಂಬಿಸುತ್ತಿರುವ ಶೇ. 40 ಕಮೀಷನ್ ರೆಕ್ಕೆಪುಕ್ಕ ಪಡೆದುಕೊಂಡಿದೆ. ಪಕ್ಷದ ಕಾರ್ಯಕರ್ತರು ಜನರಿಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡಬೇಕು ಎಂದರು.

Leave a Reply

Your email address will not be published. Required fields are marked *