ಇಡೀ ರಾಷ್ಟ್ರದಲ್ಲಿ ಸುದ್ದಿಯಾಗಿ, ಪ್ರಪಂಚದ ಗಮನ ಸೆಳೆದು ರಾಜ್ಯಾದ್ಯಂತ ಕಳೆದೆರಡು ತಿಂಗಳಿಂದ ಸಂಘರ್ಷದ ವಾತಾವರಣ ಹುಟ್ಟುಹಾಕಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪನ್ನು ಮಂಗಳವಾರ ಬೆಳಗ್ಗೆ 10.30 ಕ್ಕೆ ಪ್ರಕಟಿಸುವುದಾಗಿ ಕರ್ನಾಟಕ ಹೈಕೋರ್ಟ್ ಹೇಳಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ 11ನೇ ದಿನಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಕೆಯಾಗಿದ್ದ 10ಕ್ಕೂ ಹೆಚ್ಚು ಮುಖ್ಯ ಅರ್ಜಿಗಳು 25ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಸತತ 11 ದಿನಗಳ ಕಾಲ 25 ತಾಸುಗಳಿಗೂ ಹೆಚ್ಚು ಸಮಯ ಹೈಕೋರ್ಟ್ ವಿಚಾರಣೆ ನಡೆಸಿತ್ತು.ಅರ್ಜಿದಾರರು ಅಲ್ಲದೇ ಸರ್ಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕರು ಸೇರಿದಂತೆ ಉಳಿದ ಪ್ರತಿವಾದಿಗಳ ಪರವಾಗಿ ಒಟ್ಟು 25ಕ್ಕೂ ಹೆಚ್ಚು ವಕೀಲರು ತಮ್ಮ ವಾದಗಳನ್ನು ಮಂಡಿಸಿದ್ದರು.
ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಕಾಲೇಜಿನ ಐವರು ವಿದ್ಯಾರ್ಥಿನಿಯರು, ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಕುಂದಾಪುರದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಿದ್ದರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿರುವ ಆದೇಶವನ್ನೂ ಅರ್ಜಿಗಳಲ್ಲಿ ಪ್ರಶ್ನಿಸಲಾಗಿತ್ತು.
ನಾಳೆ ಹಿಜಾಬ್ ತೀರ್ಪು.. ಬೆಂಗಳೂರಲ್ಲಿ ಇಂದಿನಿಂದ 1 ವಾರ ನಿಷೇಧಾಜ್ಞೆ
ನಾಳೆ ಹಿಜಾಬ್ ಕೇಸ್ ಕುರಿತು ಹೈಕೋರ್ಟ್ ತನ್ನ ತೀರ್ಪು ನೀಡಲಿದೆ. ಹೈಕೋರ್ಟ್ ತ್ರಿಸದಸ್ಯ ಪೀಠ ಹಿಜಾಬ್ ಕೇಸ್ ಕುರಿತು ತೀರ್ಪು ನೀಡಲಿರುವ ಕಾರಣ ಯಾವುದೇ ಅನಾಹುತ ಸಂಭವಿಸಿದಂತೆ ಬೆಂಗಳೂರಿನ ಎಲ್ಲಾ ಡಿಸಿಪಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಮಲ್ ಪಂತ್ ಸಂವಾದ ನಡೆಸಿದ್ದಾರೆ.
ಸಭೆ ಬಳಿಕ ಎಲ್ಲಾ ಶಾಲಾ ಕಾಲೇಜುಗಳ ಬಳಿ ಭದ್ರತೆ ಹೆಚ್ಚಳಕ್ಕೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಇಂದಿನಿಂದ 1 ವಾರ ಕಾಲ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ನಗರದಲ್ಲಿ ಭದ್ರತೆಗಾಗಿ 10,000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗುವುದು ಎಂದರು.
ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಹೆಚ್ಚುವರಿಯಾಗಿ ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗುತ್ತೆ. ಹೈಕೋರ್ಟ್ ಆದೇಶ ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.