ರಿಪ್ಪನ್ ಪೇಟೆ ಸುತ್ತಮುತ್ತ ನಿರಂತರ ಕಾಡಾನೆ ದಾಳಿ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ :

ರಿಪ್ಪನ್‌ಪೇಟೆ: ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆ ರೈತರ ಹೊಲಗದ್ದೆಗಳಿಗೆ ನಿರಂತರ ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಂತಿದೆ.

ಅರಸಾಳು ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯತ್ನಿ ವ್ಯಾಪ್ತಿಯ ಕಾನಗೋಡು ತಮ್ಮಡಿಕೊಪ್ಪ ಹಾರಂಬಳ್ಳಿ ಬಾಳೆಕೊಡ್ಲು, ಕಾರೆಹೊಂಡ, ಕಗಚಿ, ತಳಲೆ, ಸುಳಕೋಡು ಗ್ರಾಮದ ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದೆ. ರೈತರು ಬೆಳೆದ ಅಡಿಕೆ, ತೆಂಗು, ಬಾಳೆ, ಕಬ್ಬು ಬೆಳೆಗಳನ್ನು ಮುರಿದು ತಿಂದು ನಷ್ಟಮಾಡುತ್ತಿದೆ. ಈ ಭಾಗದಲ್ಲಿ ಆನೆ ಬೀಡುಬಿಟ್ಟಿರುವ ಮಾಹಿತಿಯಿದ್ದರೂ ಅರಣ್ಯ ಇಲಾಖೆ ಮಾತ್ರ ರಾತ್ರಿ ಗಸ್ತು ತಿರುಗುವುದನ್ನು ಹೊರತು ಪಡಿಸಿದರೆ, ಆನೆಯನ್ನು ಬೇರೆಡೆ ಓಡಿಸುವ ಯಾವುದೇ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಪ್ರತಿದಿನ ರಾತ್ರಿ ಒಂದಿಲ್ಲೊಂದು ರೈತರ ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಗಲಿರುಳು ದುಡಿದು ಹತ್ತಾರು ವರ್ಷಗಳು ಕಷ್ಟಪಟ್ಟು ಸಾಕಿದ ಅಡಿಕೆ ತೆಂಗು ಮರಗಳನ್ನು ಮುರಿದು ಧರೆಗುರುಳಿಸುತ್ತಿದೆ. ಬೆಳಗಾಗಿ ನೋಡಿದರೆ ರೈತರು ತಮ್ಮ ತೋಟಗಳಲ್ಲಿನ ಕೈಗೆಬಂದ ಫಸಲನ್ನು ಕಳೆದುಕೊಂಡು ಮರುಗುವುದು ನಿತ್ಯರೋದನವಾಗಿದೆ. ನಾಳೆ ಮತ್ತೆಲ್ಲಿ ತಮ್ಮ ಜಮೀನುಗಳಿಗೆ ಆನೆ ಬರುವುದೋ ಎಂಬ ಆತಂಕದಿಂದ ರಾತ್ರಿಯೆಲ್ಲ ನಿದ್ರೆ ಬಿಟ್ಟು ಪಟಾಕಿ ಸಿಡಿಸಿ ಕಾವಲು ಕಾಯುವುದು ರೈತರಿಗೆ ಅನಿವಾರ್ಯವಾಗಿದೆ. ಬೆಳೆ ಕಳೆದುಕೊಂಡ ರೈತರು ಹಾಗೂ ಭಯಭೀತಿಗೊಂಡ ಸುತ್ತಮುತ್ತಲಿನ ಜನರು ಅರಣ್ಯಾಧಿಕಾರಿಗಳಿಗೆ, ಗೃಹ ಸಚಿವರಿಗೆ ಆನೆ ಕಾಟ ನಿರ್ಬಂಧಿಸುವಂತೆ ಪರಿಪರಿಯಾಗಿ ಹಲವು ಬಾರಿ ಬೇಡಿಕೊಳ್ಳುತ್ತಿದ್ದರೂ ಅಧಿಕಾರಸ್ತರು ಮಾತ್ರ ಜನರ ಸಮಸ್ಯೆ ಪರಿಹರಿಸಲು ನಿರಾಸಕ್ತಿ ವಹಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮೂಗುಡ್ತಿ ಅರಣ್ಯ ಕಛೇರಿ ಎದುರು ಇಲಾಖೆಯ ವಿರುದ್ದ ಜನರನ್ನು ಸಂಘಟಿಸಿ, ಪ್ರತಿಭಟಿಸಲಾಗುವುದು ಎಂದು ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ್ ಸುಳಕೋಡು ತಿಳಿಸಿದ್ದಾರೆ. 


ಹೋರಾಟಕ್ಕೆ ಅಣಿಗೊಳ್ಳುತ್ತಿರುವ ಗ್ರಾಮಸ್ಥರು: 

ನಿರಂತರ ಆನೆಧಾಳಿಯಿಂದ ಸಂಕಷ್ಟ ಪಡುತ್ತಿರುವ ರೈತರು ಗೃಹ ಸಚಿವ ಆರಗ ಜ್ಞಾನೇಂದ್ರರವರ ಗಮನಕ್ಕೆ ತಂದಿದ್ದರೂ, ಸಚಿವರ ಸೂಚನೆಗೂ ಬೆಲೆ ನೀಡದ ಅರಣ್ಯಾಧಿಕಾರಿಗಳ ದುರ್ವತ್ರನೆಯಿಂದ ಬೇಸತ್ತ ರೈತರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟವೇ ಅಂತಿಮವೆಂದುಕೊಂಡಂತಿದೆ. ಬೆಳೆನಷ್ಟವಾದ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಜಾಗೃತಿಯನ್ನು ಮೂಡಿಸುವುದರ ಮೂಲಕ ಅಧಿಕಾರಸ್ಥರ ವಿರುದ್ಧ ಪ್ರತಿಭಟನೆಗೆ ಅಣಿಗೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. 

ಕಾಡಾನೆಯು ಧಾಳಿ ಮಾಡಿ ನಮ್ಮ ತೋಟದಲ್ಲಿ 40 ಬೆಳೆದ ಅಡಿಕೆ ಮರಗಳನ್ನು ಮುರಿದು ನಾಶಪಡಿಸಿದೆ. ಕೃಷಿ ಬಿಟ್ಟರೆ ನಮಗೆ ಬೇರೆ ಬದುಕಿಲ್ಲ. ಅರಣ್ಯ ಇಲಾಖೆಯವರು ಆನೆಗಳನ್ನು ಬೇರೆಡೇ ಓಡಿಸಿ ನಾವು ಇಲ್ಲಿಯೇ ಬದುಕಲು ಅವಕಾಶ ಮಾಡಿಕೊಡಬೇಕು” ಸುಳುಗೋಡು ಗ್ರಾಮದ ರೈತ ಯೋಗೆಂದ್ರ ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *