ಮಲೆನಾಡಿನ ಹೆಸರಾಂತ ಶಕ್ತಿ ಕೇಂದ್ರವಾದ ಶ್ರೀ ಕ್ಷೇತ್ರ
ಸಿಗಂದೂರು ದೇವಸ್ಥಾನದ ಧರ್ಮಾಧಿಕಾರಿ ಡಾ ಎಸ್ ರಾಮಪ್ಪನವರಿಗೆ ತರಳಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತರಳಿ ಮಠದಿಂದ ಕಳೆದ ಹಲವು ದಶಕಗಳಿಂದ ರಾಮಪ್ಪನವರ ಸಾಮಾಜಿಕ,ಸಾಂಸ್ಕ್ರತಿಕ, ಧಾರ್ಮಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಾರ್ತಿಕೇಯ ಮಠದ ಯೋಗೆಂದ್ರ ಶ್ರೀಗಳ ಸಮ್ಮುಖದಲ್ಲಿ ರಾಮಪ್ಪ ನವರು ಪ್ರಶಸ್ತಿ ಪಡೆದರು.
ಶಕ್ತಿ ಕೇಂದ್ರ ಸಿಗಂದೂರಿನ ಹಿನ್ನಲೆ ::
ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ ಪಡೆದು ಕೊಂಡಿರುವ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನದ ಹಾಗೂ ಅಲ್ಲಿನ ಮಹಿಮೆಯ ಬಗ್ಗೆ ಕಿರು ಪರಿಚಯವನ್ನು ಇಲ್ಲಿ ಇಂದು ನಾವು ನಿಮಗೆ ನೀಡುತ್ತೇವೆ. ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ತನ್ನನ್ನು ನಂಬಿ ಬರುವ ಎಲ್ಲಾ ಭಕ್ತರ ಕೈಹಿಡಿದು ಎಲ್ಲಾ ರೀತಿಯ ಬೇಡಿಕೆಗಳನ್ನು ಈಡೇರಿಸಿದ್ದಾಳೆ. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸಿಗಂದೂರಿನ ಕಾನನದಲ್ಲಿ ಕುಳಿತು ದೇಶದ ಮೂಲೆ ಮೂಲೆಯಿಂದ ಭಕ್ತರನ್ನು ತನ್ನಲ್ಲಿಗೆ ಕರೆಸಿಕೊಳ್ಳುವ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ಕ್ಷೇತ್ರ ಎರಡು ದಶಕಗಳ ಹಿಂದೆ ಈ ರೀತಿ ಇರಲಿಲ್ಲ. ಎರಡು ದಶಕಗಳ ಹಿಂದಿನ ಪುಟಗಳನ್ನು ನಾವು ತೆಗೆದು ನೋಡಿದರೆ ಸಿಗಂದೂರು ಎಂಬ ಪ್ರದೇಶ ಒಂದು ಸಾಮಾನ್ಯ ಗ್ರಾಮವಾಗಿತ್ತು, ಅದೇ ಗ್ರಾಮ ಇದೀಗ ಜಗನ್ಮಾತೆಯ ಉಪಸ್ಥಿತಿಯಿಂದಾಗಿ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಲಕ್ಷಾಂತರ ಜನರು ಪ್ರತಿವರ್ಷ ತಮ್ಮ ಬೇಡಿಕೆಗಳನ್ನು ಹೊತ್ತುಕೊಂಡು ತಾಯಿಯ ಬಳಿ ಬರುತ್ತಾರೆ. 25 ವರ್ಷಗಳ ಹಿಂದೆ ಸಾಮಾನ್ಯ ಗ್ರಾಮವಾಗಿದ್ದ ಸಿಗಂದೂರು ಇದೀಗ ದಿವ್ಯ ಕ್ಷೇತ್ರವಾಗಿ ಮಾರ್ಪಟ್ಟು ನಮ್ಮ ಕಣ್ಣಮುಂದೆಯೇ ಬೆಳೆದು ಕಣ್ಣಿನ ಅಂದಾಜಿಗೂ ಸಿಗದಷ್ಟು ದೊಡ್ಡದಾಗಿ ಬೆಳೆದು ಬಿಟ್ಟಿದೆ.
ಇಪ್ಪತ್ತೈದು ವರ್ಷಗಳ ಹಿಂದಿನ ಪುಟಗಳನ್ನು ನಾವು ತೆಗೆದು ನೋಡಿದರೆ ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಗೊಂಡಾರಣ್ಯದ ಗುಹೆಯೊಂದರಲ್ಲಿ ನೆಲೆಸಿದ್ದರು, ಅಂದಿನ ಕಾಲದಲ್ಲಿ ತಾಯಿಯ ದರ್ಶನ ಪಡೆಯಲು ಕೇವಲ ಒಂದು ಸೀಮಿತವಾದ ಭಕ್ತವೃಂದ ತೆರಳುತ್ತಿತ್ತು. ಹೌದು, ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಧರ್ಮದರ್ಶಿಗಳ ಆಗಿರುವ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಆಗಿರುವ ಶೇಷಗಿರಿ ರವರಿಗೆ ಪ್ರೇರಣೆ ನೀಡುವ ಮೂಲಕ ಸಿಗಂದೂರು ಕ್ಷೇತ್ರ ಒಂದು ಮಹಾನ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಆ ಪ್ರೇರಣೆಯ ಫಲಶ್ರುತಿ ಇಂದು ನಮ್ಮ ಕಣ್ಣಮುಂದೆ ಕಾಣುತ್ತಿದೆ. ಇನ್ನು ಈ ದೇವಸ್ಥಾನದ ಹಿನ್ನೆಲೆಯನ್ನು ನಾವು ಹೇಳಬೇಕೆಂದರೆ ಶೇಷಪ್ಪ ಎಂಬುವವರು ಇಲ್ಲಿನ ಕಾಡು ಪ್ರದೇಶದಲ್ಲಿ ಒಂದು ದಿನ ದಾರಿ ತಪ್ಪಿ ರುತ್ತಾರೆ, ಇಡೀ ಕಾಡಿನಲ್ಲಿ ಅಲೆದಾಡಿ ದಾರಿ ಕಾಣದೇ ಸುಸ್ತಾಗಿ ವಿಶ್ರಮಿಸಲು ಮರದ ಕೆಳಗಡೆ ಕುಳಿತು ನಿದ್ದೆ ಮಾಡುವ ಸಂದರ್ಭದಲ್ಲಿ ಅವರ ಕನಸಿನಲ್ಲಿ ಚೌಡೇಶ್ವರಿ ತಾಯಿಯ ಪ್ರತ್ಯಕ್ಷರಾಗಿ ದೇವಾಲಯ ನಿರ್ಮಿಸುವಂತೆ ಹಾಗೂ ಅಲ್ಲಿರುವ ವಿಗ್ರಹದ ಕುರಿತು ಅವರಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಕನಸು ಎಂದು ಸುಮ್ಮನಾಗದ ಶೇಷಪ್ಪ ರವರು ತಾಯಿ ಹೇಳಿದ ಮಾತುಗಳಂತೆ ನದಿಯಲ್ಲಿ ವಿಗ್ರಹಗಳನ್ನು ಹುಡುಕಲು ಆರಂಭಿಸಿ ಕೊನೆಗೆ ಹುಡುಕಿ ತನ್ನ ಊರಿನ ಬ್ರಾಹ್ಮಣ ಪುರೋಹಿತ ದುಗ್ಗಜ್ಜ ಅವರೊಂದಿಗೆ ಸೇರಿಕೊಂಡು ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯ ನಿರ್ಮಾಣ ಮಾಡುತ್ತಾರೆ.
ಇನ್ನು ಈ ಕ್ಷೇತ್ರದಲ್ಲಿ ಬಹಳ ಒಂದು ವಿಶಿಷ್ಟವಾದ ಆಚರಣೆ ಇದೆ, ಅದು ಏನೆಂದರೆ ಇಲ್ಲಿನ ಜನರು ತಮ್ಮ ತಮ್ಮ ಜಮೀನು, ಮನೆ ಹಾಗೂ ಇನ್ನಿತರ ಯಾವುದೇ ವಸ್ತುಗಳಿಗೆ ಚೌಡೇಶ್ವರಿ ದೇವಿಯ ಕಾವಲು ಇದೆ ಎಂದು ಬೋರ್ಡುಗಳನ್ನು ಹಾಕಿರುತ್ತಾರೆ, ಇದನ್ನು ನೀವು ಕೂಡ ಗಮನಿಸಿರಬಹುದು. ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀವು ತೆರಳಿದರೆ ಈ ರೀತಿಯ ಹಲವಾರು ಬೋರ್ಡುಗಳನ್ನು ನೀವು ಕಾಣುತ್ತೀರಿ, ಈ ಬೋರ್ಡ್ ಗಳ ವಿಶೇಷವೇನೆಂದರೆ ಈ ರೀತಿ ಬೋರ್ಡ್ ಹಾಕಿದರೇ ಯಾವುದೇ ಕಳ್ಳರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಇಲ್ಲಿನ ಜನ ನಂಬುತ್ತಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಭೇಟಿ ನೀಡಬೇಕಾಗಿರುವ ಈ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯ ಹಿನ್ನೀರಿನಲ್ಲಿ ಇದೆ ಒಮ್ಮೆ ಭೇಟಿ ಕೊಟ್ಟು ತಾಯಿ ಆಶೀರ್ವಾದ ಪಡೆದುಕೊಳ್ಳಿ.