ಹೊಸನಗರ: ಕೋಡೂರು, ಹುಂಚ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಅವ್ಯವ್ಯಸ್ಥೆಯಿಂದಾಗಿ ರೈತರ ಬೆಳೆಗಳು ಒಣಗುವಂತಾಗಿದೆ ಮತ್ತು ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿ ಇಂದು ಕೋಡೂರು, ಹುಂಚ ವ್ಯಾಪ್ತಿಯ ರೈತರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕಲಗೋಡು ರತ್ನಾಕರ ಮತ್ತು ತಾ.ಪಂ.ಮಾಜಿ ಸದಸ್ಯ ಚಂದ್ರಮೌಳಿಗೌಡ ನೇತೃತ್ವದಲ್ಲಿ ಹೊಸನಗರದ ಮೆಸ್ಕಾಂ ಕಛೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ರೈತರ ಸಮಸ್ಯೆಗೆ ಮೆಸ್ಕಾಂ ಇಲಾಖೆ ಸ್ಪಂದಿಸಿ ಸೂಕ್ತ ರೀತಿಯಲ್ಲಿ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸ ಬೇಕು ಎಂದರು.
ನಂತರ ಮಾತನಾಡಿದ ತಾಪಂ ಮಾಜಿ ಸದಸ್ಯರಾದ ಬಿ ಜಿ ಚಂದ್ರಮೌಳಿ ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ ತಿಂಗಳಿಂದ ಜೂನ್ ತಿಂಗಳವರೆಗೆ ಹೊಸನಗರ ತಾಲ್ಲೂಕಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಸಮರ್ಪಕ ವಿದ್ಯುತ್ ನೀಡಬೇಕು ಇಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಇಲಾಖೆಯ ವಿರುದ್ದ ಉಗ್ರ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹುಂಚ ಹೋಬಳಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರುರಾಜ ಸುಣ್ಣಕಲ್ , ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ ಪಟೇಲ್ , ಹುಂಚ ಘಟಕದ ಉಪಾಧ್ಯಕ್ಷ ಗುರುರಾಜ ಭಂಡಾರಿ,  ಸಾಮಾಜಿಕ ಜಾಲತಾಣ ಮುಖ್ಯಸ್ಥ ಉಲ್ಲಾಸ್ ಭಟ್, ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
		 
                         
                         
                         
                         
                         
                         
                         
                         
                         
                        