Headlines

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್ ವಿತರಿಸಿದ ಯಡಿಯೂರಪ್ಪ

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಕರ್ನಾಟಕ ಸರ್ಕಾರ ಹರ್ಷ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ಘೋಷಣೆ ಮಾಡಿತ್ತು.ಇಂದು ಪರಿಹಾರದ ಚೆಕ್ ಹಸ್ತಾಂತರ ಮಾಡಲಾಗಿದೆ.

ಭಾನುವಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಮನೆಗೆ ಇಂದು ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರ್ಕಾರದ ವತಿಯಿಂದ 25 ರೂ. ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.

ಫೆಬ್ರವರಿ 20ರಂದು ರಾತ್ರಿ ಹರ್ಷ ಕೊಲೆಯಾಗಿತ್ತು. ಹತ್ಯೆಯ ಬಳಿಕ ಶಿವಮೊಗ್ಗ ನಗರ ಪ್ರಕ್ಷುಬ್ಧಗೊಂಡಿತ್ತು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕರ್ಫ್ಯೂ ಹೇರಿ, ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು.

ಶಿವಮೊಗ್ಗದ ಕ್ಲಾರ್ಕ್ ಪೇಟ್ ನಿವಾಸಿ ಮೊಹಮ್ಮದ್ ಖಾಸಿಫ್ ಹರ್ಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಹರ್ಷ ಮತ್ತು ಖಾಸಿಫ್ ಆಗಾಗ ಜಗಳವಾಡುತ್ತಿದ್ದರು. ಇಸ್ಲಾಂ ಕುರಿತು ಹರ್ಷ ಹಾಕುತ್ತಿದ್ದ ಫೇಸ್‌ಬುಕ್ ಪೋಸ್ಟ್‌ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು.


ಹಳೇ ದ್ವೇಷದ ಹಿನ್ನಲೆಯಲ್ಲಿ ಮೊಹಮ್ಮದ್ ಖಾಸಿಫ್ ಸ್ನೇಹಿತರ ಜೊತೆ ಸೇರಿ ಹರ್ಷ ಕೊಲೆಗೆ ಸಂಚು ರೂಪಿಸಿದ್ದ. ಫೆಬ್ರವರಿ 20ರ ರಾತ್ರಿ ಹರ್ಷ ಹೋಟೆಲ್‌ಗೆ ಊಟಕ್ಕೆ ಹೋಗುವಾಗ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.

ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಹರ್ಷ ಶವವನ್ನು ಆಸ್ಪತ್ರೆಯಿಂದ ಸೀಗೆಹಟ್ಟಿ ನಿವಾಸಕ್ಕೆ ತೆಗೆದುಕೊಂಡು ಹೋಗುವಾಗ, ಪಾರ್ಥಿವ ಶರೀರದ ಮೆರವಣಿಗೆ ವೇಳೆ ಗಲಭೆ ನಡೆದಿತ್ತು.


ಮುಖ್ಯಮಂತ್ರಿಗಳ ಹೇಳಿಕೆ

 ಹರ್ಷ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವುದು ನಿರ್ಧಾರವಾಗುತ್ತದೆ” ಎಂದು ಹೇಳಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ, ಸಚಿವ ಕೆ. ಎಸ್. ಈಶ್ವರಪ್ಪ, “ಹಿಂದೂ ಸಂಘಟನೆಯ ಹರ್ಷ ಕಗ್ಗೊಲೆ ಆಗುವ ಕಲ್ಪನೆ ನಮಗ್ಯಾರಿಗೂ ಇರಲಿಲ್ಲ. ಕಗ್ಗೊಲೆ ಆದ ತಕ್ಷಣ ಕೊಲೆಗಡುಕ ಗೂಂಡಾಗಳನ್ನು ರಾಜ್ಯ ಸರ್ಕಾರ ಬಂಧಿಸಿದೆ” ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *