ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಸಮೀಪವಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಗುಜರಿ ವಸ್ತುಗಳು ಇರಿಸಿದ್ದ ಸ್ಥಳದ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್’ಫಾರ್ಮರ್ ಇದೆ. ಇದರಿಂದ ಕಿಡಿ ಬಿದ್ದು ಬೆಂಕಿ ಹೊತ್ತುಕೊಂಡಿರುಬಹುದು ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಶಂಕೆ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ.
ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಡಿಎಫ್ಒ ಅಶೋಕ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಮಾರ್ಡನ್ ಟಾಕೀಸ್ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಗುಜರಿ ಅಂಗಡಿಗಳಿವೆ. ಗುಜರಿ ವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಬೇಕಾಬಿಟ್ಟಿ ರಸ್ತೆಗಳಲ್ಲಿ ಇಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳು ಮತ್ತು ಜನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇಂತಹ ಅವಘಡ ಸಂಭವಿಸಿದರೆ, ಬೆಂಕಿಯು ಅತ್ಯಂತ ವೇಗವಾಗಿ ವ್ಯಾಪಿಸಿಕೊಳ್ಳಲು ಅನುವಾಗುತ್ತದೆ.
		 
                         
                         
                         
                         
                         
                         
                         
                         
                         
                        