ಜಾಗದ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ವ್ಯಕ್ತಿ : ಮನವೊಲಿಸಿ ಕೆಳಗಿಳಿಸುವಲ್ಲಿ ಪಿಎಸ್ ಐ ಶಿವಾನಂದ ಕೋಳಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿ :

ಖಾಸಗಿ ವ್ಯಕ್ತಿಗಳು ತನ್ನ ಮನೆಯನ್ನು ನೆಲಸಮಗೊಳಿಸಿ ಅನ್ಯಾಯ ಎಸಗಿದ್ದಾರೆ ಹಾಗೂ ಈ ಬಗ್ಗೆ ಯಾರು ಸೂಕ್ತ ರೀತಿಯಲ್ಲಿ ನ್ಯಾಯ ದೊಕಿಸಿಕೊಟ್ಟಿಲ್ಲ ಎಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿ ನಡೆಯಿತು.


ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡೂರಿನ ಶಾಂತಪುರ ವಾಸಿ ಕೃಷ್ಣಮೂರ್ತಿ ಅಲಿಯಾಸ್ ಮೀಸೆ ಕೃಷ್ಣ ಬಿನ್ ಹುಚ್ಚನಾಯ್ಕ (47) ಎಂಬಾತನು ಗ್ರಾಮ ಪಂಚಾಯಿತಿ ಎದುರುಗಡೆ ಇರುವ ಏರ್ ಟೆಲ್ ಟವರ್ ನ ಸುಮಾರು 150 ಅಡಿಗಳಷ್ಟು ಮೇಲೆ ಏರಿ ಕುಳಿತು ತನ್ನ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ ಘಟನೆ ಇಂದು ನಡೆಯಿತು.


ವಿಷಯ ತಿಳಿಯುತ್ತಿದ್ದಂತೆ ಟವರ್ ಬಳಿ ಜನಸಾಮಾನ್ಯರು ನೆರೆದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಊರಿನ ಗ್ರಾಮಸ್ಥರೆಲ್ಲಾ ಕೆಳಗೆ ಇಳಿಯುವಂತೆ ಎಷ್ಟೇ ಬಾರಿ ಮನವಿ ಮಾಡಿದರು ಕೇಳದೇ ಹಠ ಹಿಡಿದು ತಹಶೀಲ್ದಾರ್ ಸ್ಥಳಕ್ಕೆ ಬರುವವರೆಗೂ ಇಳಿಯುವುದಿಲ್ಲ ಎಂದು ಹೇಳಿದ್ದಾನೆ.

ಈ ಸಂಧರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರಿಪ್ಪನ್ ಪೇಟೆ ಪಿಎಸ್ ಐ ಶಿವಾನಂದ ಕೋಳಿ ರವರು ಟವರ್ ಹತ್ತಿ ಕುಳಿತಿದ್ದ ಕೃಷ್ಣಮೂರ್ತಿ ಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸುಮಾರು 20 ನಿಮಿಷಗಳು ಮಾತನಾಡಿ ನ್ಯಾಯ ದೊರಕಿಸುವ ಭರವಸೆ ನೀಡಿದ ನಂತರ ಕೆಳಗಿಳಿಯಲು ಒಪ್ಪಿದ್ದಾನೆ.

ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೆಳಗೆ ಇಳಿಯುತ್ತಿದ್ದ ಕೃಷ್ಣಮೂರ್ತಿ ಸುಸ್ತಾಗುತ್ತಿರುವುದನ್ನು ಮನಗಂಡು 50 ಅಡಿ ಮೇಲೇರಿ ಕೃಷ್ಣಮೂರ್ತಿಗೆ ನೀರು ಕುಡಿಸಿ ನಂತರ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆತನನ್ನು ಹತ್ತಿರದ ಗ್ರಾಮ ಪಂಚಾಯತಿ ಕಛೇರಿಗೆ ಕರೆದುಕೊಂಡು ಹೋಗಲಾಯಿತು.

ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿ ಎಸ್ ರಾಜೀವ್ ಕೃಷ್ಣಮೂರ್ತಿಯವ ಸಮಸ್ಯೆಯನ್ನು ಆಲಿಸಿ ನಂತರ ಕೃಷ್ಣಮೂರ್ತಿಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.


ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಹಾಯಕ ಠಾಣಾಧಿಕಾರಿ ಕೆ.ಟಿ ರಾಜಪ್ಪ, ಕೆ‌‌.ಹೆಚ್ ರಾಜೇಶ್, ಅಗ್ನಿಶಾಮಕರಾದ ಮಂಜುನಾಥ್ ಬಿ. ಭೀಷ್ಮಾಚಾರಿ ಕಮ್ಮಾರ್, ಶಿವರಾಜ್ ಮೊದಲಾದವರು ಠಾಣಾಧಿಕಾರಿ ಹಾಲೇಶಪ್ಪನವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಕೆ ಮಧುಸೂದನ್, ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ಪ್ರವೀಣ್, ಕೋಡೂರು ಪಿಡಿಒ ಪ್ರವೀಣ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಹಾಜರಿದ್ದರು.


ಈ ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇

Leave a Reply

Your email address will not be published. Required fields are marked *