ಸರಕಾರ ಹಾಗೂ ಬ್ಯಾಂಕ್ ಗಳು ಹಲವಾರು ಜಾಹಿರಾತಿನ ಮೂಲಕ ಆನ್ ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಹಲವರು ಈಗಲೂ ಆನ್ ಲೈನ್ ವಂಚಕರ ಬಲೆಗೆ ಬೀಳುತಿದ್ದಾರೆ. ಶಿವಮೊಗ್ಗದ ವಿದ್ಯಾರ್ಥಿಯೊಬ್ಬ ಆನ್ ಲೈನ್ ವಂಚನೆಗೆ ಒಳಗಾಗಿ ಪರಿತಪಿಸುತ್ತಿರುವ ಘಟನೆ ನಡೆದಿದೆ.
ಪಾನ್ ಕಾರ್ಡ ಅಪ್ಡೇಟ್ ಮಾಡಿಕೊಳ್ಳುವಂತೆ ಬಂದ ಲಿಂಕ್ ಒತ್ತುವ ಮೂಲಕ ವಿದ್ಯಾರ್ಥಿಯೋರ್ವ 79998/- ರೂ. ಹಣ ಕಳೆದುಕಂಡ ಘಟನೆ ಈಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡದಿದೆ.
ಅಪರಿಚಿತ ಮೊಬೈಲ್ ನಂಬರ್ ಮೂಲಕ ಬಂದ ಲಿಂಕ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಪಾನ್ ಕಾರ್ಡನ ನಂಬರ್ ನ್ನ ಅಪ್ಡೇಡ್ ಮಾಡಿಕೊಳ್ಳುವಂತೆ ಸೂಚಿಸಿದ್ದರಿಂದ 20 ವರ್ಷದ ವಿದ್ಯಾರ್ಥಿ ಲಿಂಕ್ ಕ್ಲಿಕ್ ಮಾಡಿದ್ದಾನೆ.
ಲಿಂಕ್ ನಲ್ಲಿ SBI ಬ್ಯಾಂಕ್ ನ ವೆಬ್‌ಸೈಟ್ ಓಪನ್ ಆಗಿರುತ್ತದೆ. ಇದು SBI ಬ್ಯಾಂಕ್ ನ ಲಾಗಿನ್ ಎಂದು ನಂಬಿ ವಿದ್ಯಾರ್ಥಿ ಲಾಗಿನ್ ಮತ್ತು ಪಾಸ್ ವರ್ಡ ನೀಡುತ್ತಾನೆ. ಪಾಸ್ ವರ್ಡ ಮತ್ತು ಲಾಗಿನ್ ನೀಡುತ್ತಿದ್ದಂತೆ ಒಟಿಪಿ ಸಿಗುತ್ತದೆ. ಒಟಿಪಿ ಯನ್ನು ಅಪ್ ಡೇಟ್ ಮಾಡುತಿದ್ದಂತೆ 24998/-, 5೦೦೦೦/- ಹಾಗೂ 5 ಸಾವಿರ ರೂವನ್ನ ಹಂತ ಹಂತವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಳ್ಳುತ್ತಾ ಹೋಗುತ್ತಾನೆ.
ತಾನು ಮೋಸಹೋಗಿರುವುದು ವಿದ್ಯಾರ್ಥಿಯ ಅರಿವಿಗೆ ಬರುತ್ತಿದ್ದಂತೆ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ.
ಆನ್ ಲೈನ್ ವಂಚಕರ ಬಗ್ಗೆ ಇರಲಿ ಎಚ್ಚರ :
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್ ಲೈನ್ ವಂಚನೆ ಬಗ್ಗೆ ಅದೆಷ್ಟೇ ಜಾಗೃತಿ ಮೂಡಿಸಿದರೂ, ಗ್ರಾಹಕರು ಒಂದಿಲ್ಲೊಂದು ರೀತಿಯಲ್ಲಿ ವಂಚಕರ ಖೆಡ್ಡಾಗೆ ಬೀಳುವುದು ಮಾತ್ರ ತಪ್ಪಿಲ್ಲ. ಯಾವ ರೀತಿಯಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ ಎನ್ನುವ ಬಗ್ಗೆ ವರದಿಯೊಂದು ಸಿದ್ಧವಾಗಿದೆ.
ಪ್ರಮುಖವಾಗಿ ಐದು ರೀತಿಯಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದು, ಐಡೆಂಟಿಟಿ ಕಳವು ಅಥವಾ ಹೊಸ ಖಾತೆ ಮಾಡಿಸುವ ನೆಪದಲ್ಲಿ ವಂಚಕರು ಗ್ರಾಹಕರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ. ಶೇ.65 ರಷ್ಟು ಮಂದಿ ಈ ರೀತಿಯ ವಂಚನೆಗೆ ಒಳಗಾಗುತ್ತಾರೆ ಎಂದು ಟ್ರಾನ್ಸ್ ಯೂನಿಯನ್ ಸಿಬಿಲ್ ಫ್ರಾಡ್ ಟ್ರೆಂಡ್ ವರದಿಯಲ್ಲಿ ಬಹಿರಂಗವಾಗಿದೆ.
ಇದೇ ರೀತಿಯ ವಂಚನೆಗೆ ಚೆನ್ನೈ ಮೂಲದ ಭರತ್ ಎನ್ನುವವರು 50 ಸಾವಿರ ಕಳೆದುಕೊಂಡಿದ್ದಾರೆ. ವಂಚಕನೊಬ್ಬ ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿ, ಕಾರ್ಡ್ ಹಾಗೂ ಸಿವಿವಿ ನಂಬರ್ ಪಡೆದುಕೊಂಡು 50 ಸಾವಿರ ರೂ. ವಂಚಿಸಿದ್ದಾನೆ.
ಇನ್ನುಳಿದಂತೆ ನಕಲಿ ದಾಖಲೆಗಳನ್ನು ಇನ್ನೊಬ್ಬರ ಹೆಸರಲ್ಲಿ ಸೃಷ್ಟಿಸಿ ಸಾಲಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಂಚಕರ ಮತ್ತೊಂದು ದಾರಿ ಎಂದರೆ ಖಾತೆದಾರರ ಲಾಗ್ ಇನ್ ಐಡಿ-ಪಾಸ್‌ವರ್ಡ್ ಪಡೆದುಕೊಂಡು, ಅಲ್ಲಿಂದ ಖಾತೆಯ ಹಣ ಲಪಟಾಯಿಸುವುದು. ಆದ್ದರಿಂದ ಯಾವುದೇ ಕಾರಣಕ್ಕೂ ಗ್ರಾಹಕರು ಯಾವುದೇ ವ್ಯಕ್ತಿಗೆ ತಮ್ಮ ಖಾತೆಯ ನಂಬರ್, ಪಾಸ್ ವರ್ಡ್ ಗಳನ್ನು ನೀಡಬಾರದು. ಬ್ಯಾಂಕಿನ ಅಧಿಕಾರಿಗಳೆಂದರೂ ನೀಡಬಾರದು ಎಂದು ಎಲ್ಲ ಬ್ಯಾಂಕ್ ಗಳು ಜಾಗೃತಿ ಮೂಡಿಸುತ್ತಿದ್ದರೂ, ಕೆಲವರು ಈ ಖೆಡ್ಡಾಗೆ ಆಗ್ಗಿಂದಾಗ್ಗೆ ಬೀಳುತ್ತಿದ್ದಾರೆ.