ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ಪುನಶ್ಚೇತನಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಜೆಡಿಎಸ್ ನಲ್ಲಿ ಸಂಚಲನ ಮೂಡಿಸಿದ್ದ ಎಂ. ಶ್ರೀಕಾಂತ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಿಂದ ಸ್ವಲ್ಪ ದೂರವೇ ಉಳಿಸಿದ್ದರು. ಆದರೆ, ಮೊನ್ನೆ ನಡೆದ ಜೆಡಿಎಸ್ ವಿಷನ್-2021ರ ಸಮಾವೇಶದಲ್ಲಿ ಪಕ್ಷದ ವರಿಷ್ಟರು ಜಿಲ್ಲಾ ಜೆಡಿಎಸ್ ನ ನಾಯಕತ್ವವನ್ನು ಮತ್ತೆ ಶ್ರೀಕಾಂತ್ ಹೆಗಲಿಗೆ ಹೊರಿಸಿದ್ದಾರೆ.
ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ. ಶ್ರೀಕಾಂತ್ 20 ಸಾವಿರಕ್ಕೂ ಹೆಚ್ಚು ಮತಗಳಿಸುವ ಮೂಲಕ ಜೆಡಿಎಸ್ಗೆ ಮತಬ್ಯಾಂಕ್ ಸೃಷ್ಟಿಸಿದ್ದರು.ಆದರೆ, ಬದಲಾದ ವಿದ್ಯಮಾನಗಳಿಂದ ಜಿಲ್ಲಾ ಜೆಡಿಎಸ ಸಾರಥ್ಯವನ್ನು ನಿರಂಜನ್ ಹೆಗಲಿಗೆ ನಂತರ ಆರ್.ಎಂ. ಮಂಜುನಾಥ್ ಗೌಡರ ಹೆಗಲಿಗೆ ವಹಿಸಲಾಗಿತ್ತು. ಆರ್.ಎಂ. ಮಂಜುನಾಥಗೌಡರು ಕಾಂಗ್ರೆಸ್ ಸೇರ್ಪಡೆಗೊಂಡನಂತರ ಜಿಲ್ಲಾ ಜೆಡಿಎಸ್ನ ಸಾರಥ್ಯ ಯಾರಿಗೆ ಸಿಗಲಿದೆ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಶ್ರೀಕಾಂತ್ ಅವರು ಸಹ ಜಿಲ್ಲೆಯ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿರಲಿಲ್ಲ. ಹಾಗೆಯೇ ಶ್ರೀಕಾಂತ್ ಅವರೂ ಸಹ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳೂ ರಾಜಕೀಯವಲಯದಲ್ಲಿ ಹರಿದಾಡುತ್ತಿತ್ತು. ಇದೀಗ ಆ ಎಲ್ಲ ಊಹಾಪೋಹಗಳಿಗೂ ತೆರೆಬಿದ್ದಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪರ್ವ ಆರಂಭವಾದ ನಂತರ ಜೆಡಿಎಸ್ ದಿನೇ ದಿನೇ ದುರ್ಬಲವಾಗುತ್ತಾ ಬಂದಿತ್ತು. ಎಂ. ಶ್ರೀಕಾಂತ್ ಅವರು ಮೊದಲಬಾರಿಗೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಜೆಡಿಎಸ್ ನಲ್ಲಿ ಸಂಚಲನ ಮೂಡಿಸಿದ್ದರು. ಜೆಡಿಎಎಸ್ ನಲ್ಲಿ ಸಕ್ರಿಯ ಚಟುವಟಿಕೆಗಳು ನಡೆದಿದ್ದವು.
ಮತಗಳಿಕೆಯಲ್ಲೂ ಸ್ವಲ್ಪ ಏರಿಕೆ ಕಂಡಿತ್ತಲ್ಲದೆ, 2012ರ ಚುನಾವಣೆಯಲ್ಲಿ ಜಿಲ್ಲೆಯಿಂದ ಮೂವರು ಶಾಸಕರು ಆಯ್ಕೆಯಾಗಿದ್ದರು. ಅಲ್ಲದೆ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಆರ್. ಪ್ರಸನ್ನಕುಮಾರ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ನಿರಂಜನ್ ಪ್ರಬಲ ಪೈಪೋಟಿ ನೀಡಿದ್ದರು.
ಎಂ. ಶ್ರೀಕಾಂತ್ ರಾಜಕೀಯವಾಗಿ ಜೆಡಿಎಸ್ ನಲ್ಲಿದ್ದರೂ ಎಲ್ಲ ಪಕ್ಷಗಳಲ್ಲೂ ಸ್ನೇಹಿತರನ್ನು ಹೊಂದಿದ್ದಾರೆ. ಹಾಗೆಯೇ ಯಾರೇ ಅವರ ಬಳಿ ಸಹಾಯ ಕೇಳಿ ಹೋದರೂ ಪಕ್ಷ, ಜಾತಿ ಬೇಧ ಮಾಡದೇ ಸಹಾಯ ಮಾಡುತ್ತಲೇ ಬಂದಿದ್ದಾರೆ. ಯಾವ ಸಂದರ್ಭದಲ್ಲೂ ಸೋತರೂ ಗೆದ್ದರೂ ತಲೆ ಕೆಡಿಸಿಕೊಳ್ಳದ ಶ್ರೀಕಾಂತ್ ಪಕ್ಷದ ಸಂಘಟನೆಗಾಗಿ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಈಗ ಮತ್ತೊಮ್ಮೆ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ಸಿಕ್ಕರುವುದರಿಂದ ಹಾಗೂ ಜೆಡಿಎಸ್ನ ಪರಮೋಚ್ಛನಾಯಕ ಹೆಚ್.ಡಿ.ದೇವೇಗೌಡರ ನಿಕಟವರ್ತಿಯಾಗಿರುವುದರಿಂದಾಗಿ ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್ ನಲ್ಲ್ಲಿ ಸಂಚಲನ ಮೂಡಿದೆ.
ಅದಲ್ಲದೇ ಜೆಡಿ ಎಸ್ ಗೆ ಪಕ್ಷನಿಷ್ಠೆ ಮೆರೆಯುತ್ತಾ ಸೋಲು,ಗೆಲುವುಗಳಲ್ಲಿ ಅಧಿಕಾರ ಬಯಸದೇ ಇರುವ ಎಂ.ಶ್ರೀಕಾಂತ್ ಅವರಿಗೆ ಪಕ್ಷ ಅಧಿಕಾರದಲ್ಲಿದ್ದಾಗಲೂ ಯಾವುದೇ ಪದವಿ ನೀಡಿಲ್ಲ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿದ್ದು, ಇನ್ನಾದರೂ ಶ್ರೀಕಾಂತ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ