ರಿಪ್ಪನ್ ಪೇಟೆ : ಪಟ್ಟಣದಲ್ಲಿ ಇಂದು ಸಂಜೆಯಿಂದ ಧಾರಾಕಾರ ಮಳೆ ಸುರಿದಿದೆ. ವಿನಾಯಕ ವೃತ್ತ ಸೇರಿ ಹಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿದಿದ್ದು, ಜನರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಪಟ್ಟಣದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಶುರುವಾಗಿದ್ದು, ಬಿಡುವು ಕೊಡದೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ಇವತ್ತು ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸಂಜೆ ಮೇಲೆ ಮಳೆಯಾಗುತ್ತಿದೆ. ಬೆಳಿಗ್ಗೆ ಮೋಡ ಕವಿದಿತ್ತು. ಸಂಜೆಯ ನಂತರ ಮಿಂಚು, ಗುಡುಗು ಸಮೇತ ಮಳೆ ಸುರಿಯುತ್ತಿದೆ.ಸಂಜೆ ಮಳೆ ಆರ್ಭಟ ಆರಂಭವಾಗಿ ಸತತವಾಗಿ ಸುರಿಯುತ್ತಿದೆ.
ಭಾರಿ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಜನ ಮತ್ತು ವಾಹನ ಸಂಚಾರ ಕಷ್ಟಕರವಾಗಿದೆ. ವೀಕೆಂಡ್ ಮೂಡ್’ನಲ್ಲಿದ್ದವರಿಗೆ ಮಳೆ ತಣ್ಣೀರು ಎರಚಿದೆ. ಭಾನುವಾರದ ವ್ಯಾಪಾರಕ್ಕಾಗಿ ಸಿದ್ಧವಾಗಿದ್ದ ಚಾಟ್ಸ್, ತಿಂಡಿ, ತಿನಿಸು ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಮಲೆನಾಡಿಗರ ಬದುಕು ಮೂರಾಬಟ್ಟೆ ಮಾಡಿದ ಮಳೆ
ಪ್ರಕೃತಿ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ಮನುಷ್ಯರು ಸಿಕ್ಕ-ಸಿಕ್ಕ ದಾರಿಯಲ್ಲಿ ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಂಡು ವರ್ಷದ ಬದುಕು ದೂಡಲು ಮುಂದಾಗಿದ್ದಾರೆ. ಈಗಾಗಲೇ ಮಲೆನಾಡಿನಾದ್ಯಂತ ವರುಣ ಅಬ್ಬರಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ.
ಮಲೆನಾಡಲ್ಲಿ ಜನವರಿಯಿಂದಲೂ ನಿರಂತರ ಮಳೆಯಾಗಿದೆ. ಬೆಳೆ ಗಿಡದಲ್ಲಿ ಇರುವುದಕ್ಕಿಂತ ಮಣ್ಣು ಪಾಲಾಗಿದ್ದೆ ಹೆಚ್ಚು. ಮಳೆ ವಿರುದ್ಧ ತೊಡೆತಟ್ಟಿ ನಿಂತು ಬದುಕುಳಿದಿದ್ದ ಬೆಳೆಗೆ ಈಗ ಸೂರ್ಯದೇವ ಮಗ್ಗಲ ಮುಳ್ಳಾಗಿದ್ದಾನೆ. ವಾಯುಭಾರ ಕುಸಿತದಿಂದ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಜನ ಬಿಸಿಲು ನೋಡದೆ ವಾರವೇ ಕಳೆದಿದೆ.