ಜೋಗ ಜಲಪಾತ, ಹುಲಿ ಸಿಂಹಧಾಮಕ್ಕೆ ರಾಜ್ಯಪಾಲರ ಭೇಟಿ :: ಅಧಿಕಾರಿಗಳ ಜೊತೆ ಸಫಾರಿ, ಫೋಟೊ ಸೆಷನ್

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇವತ್ತು ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಂಡರು. ಎರಡು ದಿನ ಶಿವಮೊಗ್ಗ ಪ್ರವಾಸ ಕೈಗೊಂಡಿರುವ ರಾಜ್ಯಪಾಲರು ಇವತ್ತು ಬೆಳಗ್ಗೆ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಂಡು ಸಂತಸಪಟ್ಟರು.

ಗುರುವಾರ ಬೆಳಗ್ಗೆ ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳನ್ನು ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಜೋಗ ಜಲಪಾತ, ಶರಾವತಿ ನದಿ, ಲಿಂಗನಮಕ್ಕಿ ಜಲಾಶಯದ ಕುರಿತು ಮಾಹಿತಿ ಪಡೆದರು. ಅಲ್ಲದೆ ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣದ ಕುರಿತು ತಿಳಿದುಕೊಂಡರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದರು. ರಾತ್ರಿ ಜೋಗದ ಬಾಂಬೆ ಗೆಸ್ಟ್ ಹೌಸ್’ನಲ್ಲಿ ರಾಜ್ಯಪಾಲರು ತಂಗಿದ್ದರು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಪ್ರಮುಖರು ಸ್ವಾಗತ ಕೋರಿದರು. ಈ ಸಂದರ್ಭದಲ್ಲೂ ಜೋಗದ ವೈಭವದ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಹಿತಿ ಪಡೆದಿದ್ದರು.

ಇನ್ನು, ಬೆಳಗ್ಗೆ ಜೋಗದ ವೈಭವ ಕಣ್ತುಂಬಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಅಧಿಕಾರಿಗಳ ಜೊತೆಗೆ ಫೋಟೊ ಸೆಷನ್ ನಡೆಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ರಕ್ಷಣಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಕುಮುಟ ಉಪ ವಿಭಾಗಾಧಿಕಾರಿ ರಾಹುಲ್ ಪಾಂಡೆ ಸೇರಿದಂತೆ ಹಲವರು ಇದ್ದರು. ಎಲ್ಲರೊಂದಿಗೂ ರಾಜ್ಯಪಾಲರು ಫೋಟೊ ಕ್ಲಿಕ್ಕಿಸಿಕೊಂಡರು.

ಬುಧವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತ್ಯಾವರೆಕೊಪ್ಪ ಹುಲಿ  ಮತ್ತು ಸಿಂಹಧಾಮಕ್ಕೆ ತೆರಳಿದ್ದರು. ಅಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಕಣ್ತುಂಬಿಕೊಂಡರು. ಪ್ರತಿ ಪ್ರಾಣಿ ಮತ್ತು ಪಕ್ಷಿಯ ಬಳಿಗೆ ತೆರಳಿ ಸಿಂಹಧಾಮದ ಅಧಿಕಾರಿಗಳಿಂದ ಅದರ ಕುರಿತು ಮಾಹಿತಿ ಪಡೆದುಕೊಂಡರು.

Leave a Reply

Your email address will not be published. Required fields are marked *