ಶಿವಮೊಗ್ಗ: ಕರ್ನಾಟಕ ಕಾನೂನು ವಿವಿ ನಿಗಧಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದಾಗಿ ಮೂರು ಮತ್ತು ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಂದು ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
2020ನೇ ಸಾಲಿನ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದಾಗಿ 2021ರ ಮಾರ್ಚ್ನನಲ್ಲಿ ನೆಡೆಸಲಾಯಿತು. ಆದರೆ, ಫಲಿತಾಂಶವನ್ನು 7 ತಿಂಗಳ ನಂತರ ಪ್ರಕಟಿಸಲಾಯಿತು. ಮುಂದಿನ ಸೆಮಿಸ್ಟರ್ಗಳಿಗೆ ಪ್ರವೇಶ ಕೊಡುವುದು ಸಹ ತಡವಾಗಿದೆ. ಇದರಿಂದಾಗಿ 2023ಕ್ಕೆ ಮುಗಿಯಬೇಕಾಗಿದ್ದ ಕೋರ್ಸ್ಗಳು 2024ಕ್ಕೆ ಮುಗಿಯಲಿವೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಒಂದು ವರ್ಷ ವ್ಯಾಸಂಗ ಮಾಡಬೇಕಾಗುತ್ತದೆ ಎಂದರು.
ಯುಜಿಸಿ ನಿಯಮಾವಳಿಯಂತೆ ಪರೀಕ್ಷೆಗಳನ್ನು ನಡೆಸಬೇಕು. ನಿಗಧಿತ ಪರೀಕ್ಷಾ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸಬೇಕು. ಈ ಬಗ್ಗೆ ವಿವಿಗೆ ರಾಜ್ಯಪಾಲರು ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಚಿನ್ಮಯ, ಮಂಜುನಾಥ್ ಡಿ.ಆರ್. ಸಮನ್ವಿ, ಸಿಂಚನ ಮೊದಲಾದವರಿದ್ದರು.