ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ -ಹೆಣ್ಣೋ ಎಂದು ತಿಳಿಯುದಿಲ್ಲ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿಗೆ ಬೆಂಕಿ ಹಚ್ಚಲು ಹೋದವರು. ಅವರು ಸೀರೆ ಉಟ್ಟುಕೊಂಡ್ರೆ, ಗಂಡೋ- ಹೆಣ್ಣೋ ತಿಳಿಯುವುದಿಲ್ಲ. ಕಟೀಲ್ ಅವರು ತಮ್ಮ ಪಕ್ಷದ ಹುಳುಕನ್ನು ತಾವು ಮುಚ್ಚಿಕೊಂಡ್ರೆ ಸಾಕು, ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮುಸ್ಲಿಂರ ವೋಟಿಗಾಗಿ ಹೆಚ್ಡಿಕೆ RSSಗೆ ಬೈತಾರೆ :
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇವಲ ಮತಕ್ಕಾಗಿ ಆರ್ಎಸ್ಎಸ್ಗೆ ಬೈಯ್ಯುತ್ತಿದ್ದಾರೆ. ಸಂಘವನ್ನು ಬೈಯ್ದರೆ ಜೆಡಿಎಸ್‌ಗೆ ವೋಟ್ ಬರುತ್ತೆ ಅಂತಾ ಹೀಗೆ ಮಾಡುತ್ತಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಸಂಘ ಪರಿವಾರವನ್ನು ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದಾರೆ ಅಷ್ಟೇ ಎಂದರು. ಈಶ್ವರಪ್ಪನವರಿಗೆ ನಾನು ಬೈಯ್ಯುವುದಿಲ್ಲ. ಅವರಿಗೆ ನಾನು ಬೈಯ್ದರೆ ತಡೆದುಕೊಳ್ಳುವುದಿಲ್ಲ. ಇದರಿಂದ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದರು.
ಕಾಂಗ್ರೆಸ್ ಇರೋದಿಲ್ಲ ಎನ್ನುವವರೇ ಮುಂದೆ ಬಿಜೆಪಿಯಲ್ಲಿ ಇರಲ್ಲ :
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಇರೋದಿಲ್ಲ ಎಂದು ಹೇಳುವ ಬಿಜೆಪಿಯ ವಿಜಯೇಂದ್ರ, ರವಿಕುಮಾರ್ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದರು.
ನೈತಿಕ ಪೊಲೀಸ್‌ಗಿರಿಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದು ಸರಿಯಲ್ಲ, ಇದು ಖಂಡನೀಯ ಎಂದರು. ನೀವು ಸಿಎಂ ಆಗಿ ಹೀಗೆ ಮಾತನಾಡಬಾರದಿತ್ತು. ಒಂದು ಕಡೆ ನೈತಿಕ ಪೊಲೀಸ್‌ಗಿರಿಯ ಬಗ್ಗೆ ಮಾತನಾಡುತ್ತಾರೆ, ಇನ್ನೊಂದು ಕಡೆ ಜನರ ಮನ ಗೆಲ್ಲುವ ಹೇಳಿಕೆಗಳನ್ನು ನೀಡಬೇಕೆನ್ನುತ್ತಾರೆ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನ ಮನೆ ಮೇಲೆ ಐಟಿ ರೇಡ್ ಆಗಲಿ :
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಮನೆ ಮೇಲೆ ಇಡಿ ರೇಡ್ ನಡೆಸಬೇಕು. ಷಡಕ್ಷರಿ ಅವರನ್ನು ತನಿಖೆಗೆ ಒಳಪಡಿಸಬೇಕು. ವರ್ಗಾವಣೆಯಲ್ಲಿಯೇ ನೂರಾರು ಕೋಟಿ ರೂ. ಗಳಿಸಿದ್ದಾರೆ.ಅವರ ಮೇಲೆ ರೇಡ್ ನಡೆದರೆ, ಸಂಸದ ರಾಘವೇಂದ್ರ, ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೊರ ಬರುತ್ತಾರೆ. ಪೊಲೀಸ್ ಇಲಾಖೆಯಲ್ಲಿಯೂ ಸಹ ವರ್ಗಾವಣೆಗೆ ಹಣ ತೆಗೆದುಕೊಂಡಿದ್ದಾರೆ. ಷಡಕ್ಷರಿ ಅವರು ಭದ್ರಾವತಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಇಡಿ ಮೂಲಕ ದಾಳಿ ನಡೆಸಿದ್ರೆ, ರಾಜ್ಯದ ಬೊಕ್ಕಸಕ್ಕೆ ಹಣ ಬರುತ್ತದೆ ಎಂದರು.
ಜನರನ್ನು ಕೊಂದವರೆ ಪಿಂಡ ಬಿಟ್ಟರು :
ಕೊರೊನಾದಿಂದ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಈ ಜನರ ಸಾವಿಗೆ ಕಾರಣರಾದ ಇದೇ ಬಿಜೆಪಿಯವರು ಮೃತರ ಆತ್ಮ ಬರಬಾರದೆಂದು ಪಿಂಡವನ್ನು ಬಿಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್‌ಗೆ ಟಾಂಗ್ ನೀಡಿದರು.