ಶಿವಮೊಗ್ಗ : ರಾಜ್ಯದ ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಇದನ್ನು ಅರಿತಿರುವ ಕಾಂಗ್ರೆಸ್ಸಿಗರು ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರ ಅಪ ಪ್ರಚಾರ ಇಲ್ಲದಿದ್ದರೆ ಕೋವಿಡ್ 2ನೇ ಡೋಸ್ ನೀಡಿಕೆಯಲ್ಲಿ ಇನ್ನಷ್ಟು ಪ್ರಗತಿ ಆಗುತ್ತಿತ್ತು.
ಆದಾಗ್ಯೂ, ಇಡೀ ವಿಶ್ವವೇ ಮೆಚ್ಚುವಂತಹ ರೀತಿ ಕೊರೊನಾ ಲಸಿಕೆ ನೀಡಲಾಗಿದೆ. ಲಸಿಕೆಯನ್ನು ಕಾಂಗ್ರೆಸ್ಸಿಗರು ಕೇವಲವಾಗಿ ಟೀಕಿಸಿದರು. ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಹೇಳಿದರು. ಅದು ಡಿಸ್ಟಿಲ್ ವಾಟರ್ ಎಂದರು. ಇಂದು ಸಂಭ್ರಮಾಚರಣೆ ವೇಳೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದರ ಬದಲು ಒಳ್ಳೆಯದನ್ನು ಮಾತನಾಡಲಿ ಎಂದರು.
ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಉದ್ಯಮಿಗಳಿಗೆ ಬೆದರಿಕೆ ಕರೆ ಹೋಗಿರುವುದರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರು ಏರ್ಪೋರ್ಟ್ ಮಾದರಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ತರಕಾರಿ ಪೂರೈಕೆದಾರರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ. ಹಾಗಾಗಿ, ಸೆರೆಮನೆಯನ್ನು ಅರಮನೆ ಮಾಡಿಕೊಂಡವರ ಆಟ ಬಂದ್ ಆಗಿದೆ ಎಂದು ಹೇಳಿದರು.
ವಾರಂಟ್ ಜಾರಿ ಮಾಡಲು ಹೋದ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಹಾಗೂ ಮಂಗಳೂರಿನಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಅಧಿಕಾರಿಯ ಮೇಲೆ ನಡೆದ ಹಲ್ಲೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.