ಹೊಸನಗರ :: ತಾಲ್ಲೂಕಿನಲ್ಲಿ ದಿನಂಪ್ರತಿ ಅಕ್ರಮ ಮರಳು ಸಾಗಾಟ ಹಾಗೂ ಆಕ್ರಮವಾಗಿ ಕಲ್ಲು ಕ್ವಾರಿಗಳ ಆರ್ಭಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರುಗಳನ್ನು ನಮ್ಮ ಗಮನಕ್ಕೆ ತಂದಿದ್ದು,ಆಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ಹೊಸನಗರ ತಾಲ್ಲೂಕಿನ ಹಲವು ಅಧಿಕಾರಿಗಳಿಗೆ ಅಕ್ರಮವಾಗಿ ಕಲ್ಲು,ಮರಳು ತುಂಬಿದ ವಾಹನಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಹೊಸನಗರದ ತಹಶೀಲ್ದಾರ್ ವಿ.ಎಸ್ ರಾಜೀವ್ರವರು ತಾಲ್ಲೂಕಿನ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಹೊಸನಗರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಾತನಾಡಿದ ತಹಶಿಲ್ದಾರವರು ಸಾರ್ವಜನಿಕರು ನಮ್ಮ ಅಧಿಕಾರಿಗಳ ಬಗ್ಗೆ ಲಂಚ ಪಡೆದು ವಾಹನಗಳನ್ನು ಬಿಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯಲ್ಲಿ ಸರಕಾರಿ ಅಧಿಕಾರಿಗಳ ಪಾತ್ರವಿಲ್ಲ.ಇನ್ನೂ ಮುಂದೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಹೊಸನಗರ ತಾಲ್ಲೂಕಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಓಗಳು ಅಕ್ರಮ ಮರಳುಗಾರಿಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತಕ್ಷಣ ಹೊಸನಗರ ತಾಲ್ಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅಕ್ರಮವಾಗಿ ಸಾಗಾಟ ನಡೆಸುತ್ತಿರುವ ವಾಹನಗಳನ್ನು ಹಾಗೂ ಹೊಳೆಯಲ್ಲಿ ಶೇಖರಣೆ ಮಾಡಿರುವ ಅಕ್ರಮ ಮರಳನ್ನು ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಈಗಾಗಲೇ ನೋಟಿಸ್ ಮೂಲಕ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವರದಿ : ದೇವರಾಜ್ ಆರಗ