ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಒಡೆತನದ ಖಾಸಗಿ ಕಾಲೇಜಿನ ನಾಲ್ಕು ಬಸ್ಸುಗಳಲ್ಲಿ 580 ಲೀಟರ್ ಡೀಸೆಲ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣ ಬೆನ್ನತ್ತಿದ್ದ ವಿನೋಬಾನಗರ ಪೊಲೀಸರು ಟಿಪ್ಪುನಗರದ ಸೈಯದ್ ತಬರೇಕ್ (24)ಹಾಗೂ ಸೈಯದ್ ಜಾಫರ್ (24) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 90 ಲೀಟರ್ ಡೀಸೆಲ್ ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
*ಘಟನೆ ವಿವರ :* ಶಿವಮೊಗ್ಗದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್ಮೆಂಟ್ ಬಳಿ ಸೆಪ್ಟೆಂಬರ್ 1ನೇ ತಾರೀಖಿನಂದು ಬಿಎಸ್ವೈ ಒಡೆತನದ ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ಗಳನ್ನು ರಾತ್ರಿ ತಂದು ನಿಲ್ಲಿಸಲಾಗಿತ್ತು. ಬೆಳಗ್ಗೆ ಚಾಲಕ ಬಂದು ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್ಗಳ ಕ್ಯಾಪ್ ಓಪನ್ ಆಗಿರುವುದು ಬೆಳಕಿಗೆ ಬಂದಿದೆ.
ಎರಡು ಬಸ್ಗಳಲ್ಲಿ ತಲಾ 90 ಲೀಟರ್, ಒಂದು ಬಸ್ನಲ್ಲಿ ಅಂದಾಜು 250 ಲೀಟರ್, ಮತ್ತೊಂದರಲ್ಲಿ ಸುಮಾರು 150 ಲೀಟರ್ ಡೀಸೆಲ್ ಇತ್ತು. ಈ ಸಂಬಂಧ ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 55,454 ರೂ. ಮೌಲ್ಯದ 580 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಮಾಹಿತಿ: ಅಕ್ಷಯ್ ಕುಮಾರ್