ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಅರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ-ಚಿತ್ರದುರ್ಗ ರಸ್ತೆ ಮೇಲ್ದರ್ಜೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಾ ನದಿಗೆ ನೂತನ ಸೇತುವೆ ಕಾಮಗಾರಿ ಸೇರಿ ಒಟ್ಟು 580.98 ಕೋಟಿ ರೂ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಚಾಲನೆ ನೀಡಲು ಆಗಮಿಸಿದ್ದರು. ಈ ವೇಳೆ ಹೊಳೆಹೊನ್ನೂರು ರಸ್ತೆಯಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಆರ್.ಪ್ರಸನ್ನ ಕುಮಾರ್ ಜೊತೆ ಸಚಿವರೊಂದಿಗೆ ಮಾತನಾಡಲು ಬಂದಾಗ ಏಕಾಏಕಿ ನೂಕಾಟ ಪ್ರಾರಂಭವಾಯಿತು. ಇತ್ತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಅತ್ತ ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಸಿ. ಪಾಟೀಲ್ ಹಾಗೂ ಸಂಸದ ರಾಘವೇಂದ್ರ ಅವರು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಬಳಿ ಬಂದು ಪ್ರತಿಭಟನೆಗೆ ಇಳಿದರು. ಈ ವೇಳೆ ಕೋಟೆ ಠಾಣೆ ಪಿಐ ಚಂದ್ರಶೇಖರ್ ಅವರು, ಆರ್.ಪ್ರಸನ್ನ ಕುಮಾರ್ರನ್ನು ಬಂಧಿಸಲು ಮುಂದಾದರು. ಆಗ ಸಚಿವ ಈಶ್ವರಪ್ಪ, ಪ್ರಸನ್ನ ಕುಮಾರ್ ಮನವೊಲಿಸಿ ವೇದಿಕೆಯ ಮೇಲೆ ಕೂರಿಸಿದರು. ಆದರೆ ಪಾಲಿಕೆಯ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಇಷ್ಟೊಂದು ಗಲಾಟೆ ನಡೆಸಿದವರು ಈಗ ಯಾಕೆ ವೇದಿಕೆ ಮೇಲೆ ಕುಳಿತುಕೊಂಡಿದ್ದೀರಿ ಎಂದು ಪ್ರಸನ್ನ ಕುಮಾರ್ಗೆ ಪ್ರಶ್ನಿಸಿದರು. ಇದರಿಂದ ಪುನಃ ಗರಂ ಆದ ಅವರು, ಮತ್ತೆ ವೇದಿಕೆ ಬಿಟ್ಟು ತೆರಳಿದರು. ಮತ್ತೊಮ್ಮೆ ಮಧ್ಯಪ್ರವೇಶಿಸಿದ ಈಶ್ವರಪ್ಪನವರು, ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೈ ಮುಗಿದು ವಿನಂತಿಸಿ, ಪ್ರಸನ್ನಕುಮಾರ್ ಅವರನ್ನು ವೇದಿಕೆಗೆ ಕರೆ ತಂದರು.