ತೀರ್ಥಹಳ್ಳಿ : ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಬ್ದುಲ್ ಬಷೀರ್ ಇವರು ಇಂದು ಧೀರ್ಘಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅಬ್ದುಲ್ ಕರೀಂ ಸಾಹೇಬ್ ಹಾಗು ಶ್ರೀಮತಿ ಹಾಜರಾಂಬಿ ದಂಪತಿಗಳ ಪುತ್ರರಾಗಿ 1940 ರಲ್ಲಿ ಜನಿಸಿದ ಅಬ್ದುಲ್ ಬಶೀರ್ ರವರು ತಮ್ಮ ಇಪ್ಪತಾರನೆಯ ವಯಸ್ಸಿನಲ್ಲಿ ( 1956) ಡಿ ದರ್ಜೆಯ ನೌಕರರಾಗಿ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ ಇವರು ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಅನುಪಮ ಸೇವೆ ಸಲ್ಲಿಸಿಸಿರುತ್ತಾರೆ.
ತಮ್ಮ ಸೇವಾ ಅವದಿಯ ಸುದೀರ್ಘಕಾಲ ಶಸ್ತ್ರ ಚಿಕಿತ್ಸೆ, ಅರಿವಳಿಕೆ ಸಹಾಯಕರಾಗಿ ದುಡಿದ ಇವರು ಸರಿಸುಮಾರು 13500 ದೊಡ್ಡ ಹಾಗು 15000 ಸಣ್ಣ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು.ಯಾವುದೇ ವೈದ್ಯಕೀಯ ಪದವಿಯನ್ನು ಪಡೆಯದೆ ತಮ್ಮ ಕಲಿಕಾ ಸಾಮರ್ಥ್ಯದಿಂದ ಸತತ ಮೂರು ದಶಕಗಳ ಕಾಲ ರೋಗಿಗಳಿಗೆ ಅರಿವಳಕೆ ನೀಡಿದ ಇವರ ಸಾಧನೆ ವೈದ್ಯ ಲೊಕದ ವಿಸ್ಮಯವಾಗಿದೆಯಲ್ಲದೇ ಶಸ್ತ್ರಚಿಕಿತ್ಸೆಯಲ್ಲಿ ಇವರಿಗಿದ್ದ ಪರಿಣತಿಯನ್ನು ಗಮನಿಸಿದ ಹಲವಾರು ವೈದ್ಯಾಧಿಕಾರಿಗಳು ಇವರ ಶಸ್ತ್ರಚಿಕಿತ್ಸೆಯ ಕೌಶಲ್ಯವನ್ನು ಕಂಡು ಬೆರಗಾಗಿದ್ದರು.
ಕೇವಲ ಸರ್ಕಾರಿ ಆಸ್ಪತ್ರೆಯಲ್ಲದೇ ಎಂಬತ್ತರ ದಶಕದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆರಂಭವಾದ ಎರಡು ಖಾಸಗಿ ಆಸ್ಪತ್ರೆಯಲ್ಲಿಯೂ ಅರಿವಳಿಕೆ ತಜ್ನರಾಗಿ ಸೇವೆಸಲ್ಲಿಸಿರುವ ಶ್ರೀಯುತರು ತೊಂಬತ್ತರ ದಶಕದ ಅಂತ್ಯದಲ್ಲಿ ರಾಜ್ಯ ಆರೋಗ್ಯ ಇಲಾಖೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಕೇಂದ್ರವಾದ ಜೆ.ಸಿ ಆಸ್ಪತ್ರೆಗೆ ಅದೀಕತೃತವಾಗಿ ಅರಿವಳಿಕೆ ತಜ್ಞರನ್ನು ನೇಮಿಸುವವರೆಗೂ ಶಸ್ತ್ರಚಿಕಿತ್ಸಾ ತಜ್ಞರ ಸಹಾಯಕರಾಗಿ ಕಾರ್ಯನಿರ್ವಹಿಸಿರುವುದಲ್ಲದೇ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿಗಳು ಇವರ ಕಾರ್ಯವೈಖರಿಯನ್ನು ಅಂದು ಹಾಡಿಹೊಗಳಿದ್ದರು. ದಿನನಿತ್ಯವೂ ಸಣ್ಣ ಮತ್ತು ದೊಡ್ಡ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಶುಚಿಗೊಳಿಸಿ ಶಸ್ತ್ರಚಿಕಿತ್ಸಾ ಪರಿಕರವನ್ನು ಜೋಡಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ನಗುಮೊಗದಲ್ಲಿ ಉಪಚರಿಸುತಿದ್ದ ಅಬ್ದುಲ್ ಬಷೀರ್ ಸಾಹೇಬ್ ತೀರ್ಥಹಳ್ಳಿ ತಾಲ್ಲೂಕಿನ ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದೆ.ಇವರ ಸಾಧನೆಗೆ 1996 ರಲ್ಲಿ ಇವರು ನಾಗರೀಕ ಸನ್ಮಾನಕ್ಕೆ ಭಾಜನರಾದವರು.
ಇವರ ಸಾಧನೆಯನ್ನು ಗುರುತಿಸಿ “ಇಂಡಿಯನ್ ಎಕ್ಸಪ್ರೆಸ್ಸ್” ದಿನಪತ್ರಿಕೆ ಅಂದು ವಿಷೇಶ ಲೇಖನ ಪ್ರಕಟಿಸಿ ಇವರ ಸೇವೆಯನ್ನು ಪ್ರಶಂಸಿಸಿತ್ತು. ತೊಂಬತ್ತರ ದಶಕದಲ್ಲಿ ಆರೋಗ್ಯ ಇಲಾಖೆಯಲ್ಲಿ ಇವರ ಬಹುಮುಖ ಸೇವೆಯನ್ನು ಗುರುತಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ( ಐ.ಎಂ.ಎ ) ಕರ್ನಾಟಕ ವಿಭಾಗ ಇವರನ್ನು ಗೌರವಿಸಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಬಹುದು.ಕನ್ನಡ, ತುಳು, ಕೊಂಕಣಿ, ಹಿಂದಿ ಭಾಷೆಯ ಮೇಲೆ ಅಗಾಧ ಪ್ರಭುತ್ವ ಸಾಧಿಸಿದ್ದ ಅಬ್ದುಲ್ ಬಷೀರ್ ಇವರು ವೈದ್ಯಕೀಯ ವೃತ್ತಿ ಜೀವನದಲ್ಲಿ ಕೇವಲ ” ಡಿ ” ದರ್ಜೆಯ ನೌಕರರಾಗಿದ್ದರೂ ತ್ಮ ಪ್ರತಿಭೆಯ ಮೂಲಕ ಶಸ್ತ್ರಚಿಕಿತ್ಸೆಯ ವಿವಿದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಸೃಜನಶೀಲ ನಡವಳಿಕೆಯ ಮೂಲಕ ಹಲವಾರು ನುರಿತ ಶಸ್ತ್ರಚಿಕಿತ್ಸಾ ತಜ್ಞರ ಪ್ರಶಂಸೆಯನ್ನು ಗಳಿಸಿಕೊಂಡಿದ್ದರು.
1998 ರಲ್ಲಿ ನಿವೃತ್ತಿ ಹೊಂದಿದ ಇವರು ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿ “ಬಷೀರ್ ಡ್ರೆಸ್ಸಿಂಗ್ ಸೆಂಟರ್” ನ ಮೂಲಕ ಸಾರ್ವಜನಿಕ ಸೇವೆಯನ್ನು ಮುಂದುವರೆಸಿದ ಇವರು ಸಹಸ್ರಾರು ರೊಗಿಗಳ ಪಾಲಿಗೆ ಆಸರೆಯಾಗಿದ್ದವರು.ಕೆಲವು ವರ್ಷಗಳಿಂದ ದೃಷ್ಠಿ ಹಾಗು ಇತರ ಅರೊಗ್ಯದ ಸಮಸ್ಯೆಯನ್ನು ಎದುರಿಸತ್ತಿದ್ದ ಅಬ್ದುಲ್ ಬಷೀರ್ ಸಾಹೇಬ್ ತೀರ್ಥಹಳ್ಳಿಯ ಹೈಸ್ಕೂಲ್ ರಸ್ತೆಯ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಔಷದೋಪಚಾರದ ಆರೈಕೆಯಲ್ಲಿದ್ದರು.ಕೆಲ ವರುಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ ಎಂಬತ್ತರ ವಯಸ್ಸಿನ ಶ್ರೀಯುತರು ಇಬ್ಬರು ಪುತ್ರರು ಹಾಗು ಏಕೈಕ ಪುತ್ರಿಯನ್ನು ಅಗಲಿದ್ದಾರೆ.ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ತೀರ್ಥಹಳ್ಳಿಯ ಸಮಸ್ತ ನಾಗರಿಕರ ಪರವಾಗಿ ಪ್ರಾರ್ಥಿಸುತ್ತೇವೆ.