Headlines

ರಿಪ್ಪನ್ ಪೇಟೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳಿ ಕ್ಷಮೆ ಕೋರದೆ ಇದ್ದರೆ ಬೇಳೂರು ವಿರುದ್ದ ಬಿಲ್ಲವ ಸಮಾಜದಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ :

ರಿಪ್ಪನ್ ಪೇಟೆ: ಸೊರಬದಲ್ಲಿ ಇತ್ತೀಚೆಗೆ ನಡೆದ ಈಡಿಗರ ಸಮುದಾಯದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಮಾಜಿ ಶಾಸಕ ಗೋಪಾಲಕೃಷ್ಣ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜದ ಅಧ್ಯಕ್ಷರಾದ ಗರ್ತಿಕೆರೆ ಚಂದ್ರಪ್ಪ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ಹೆಬ್ಬೆಟ್ಟು,ಅವರಿಗೆ ಯಾವುದೇ ವಿಧ್ಯಾಭ್ಯಾಸ ಇಲ್ಲ ಎಂದು ಲಘುವಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಲ್ಲವ ಸಮಾಜದ ಹಿರಿಯ ಮುಖಂಡ ರಿಪ್ಪನ್ ಪೇಟೆಯ ಸತೀಶ್ ಎನ್ ಮಾತನಾಡಿ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಹೆಸರು ಗಳಿಸಿದ್ದಾರೆ,ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ.ಈಡಿಗರ ಜಾತಿಯ ಕೋಟಾದಿಂದ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ,ಇದು ಬೇಳೂರು ರವರ ರಾಜಕೀಯ ಅಪ್ರಬುದ್ದತೆಗೆ ಸಾಕ್ಷಿಯಾಗಿದೆ,26 ಜಾತಿಗಳನ್ನು ಸೇರಿಸಿ ಈಡಿಗರು ಎಂಬ ಸಮುದಾಯವನ್ನು ರೂಪಿಸಲಾಗಿದೆ ಎಂಬುವುದು ಅವರಿಗೆ ತಿಳಿದಂತಿಲ್ಲ.ಶ್ರೀನಿವಾಸ ಪೂಜಾರಿಯವರ ಕುರಿತು ಲಘುವಾಗಿ ಮಾತನಾಡುವುದು ತರವಲ್ಲ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದರು.

ರಿಪ್ಪನ್ ಪೇಟೆ ಗ್ರಾಪಂ ಸದಸ್ಯ ಹಾಗೂ ಬಿಲ್ಲವ ಸಮಾಜದ ಪ್ರಮುಖರಾದ ಸುಧೀಂದ್ರ ಪೂಜಾರಿ ಮಾತನಾಡಿ ಸಾರ್ವಜನಿಕ ಸಮಾರಂಭದಲ್ಲಿ ಸಚಿವರೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡಬಾರದೆಂಬ ಸಾಮನ್ಯ ಜ್ಞಾನ ಬೇಳೂರುರವರಿಗೆ ಇಲ್ಲದೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.ಅವರ ಈ ವರ್ತನೆಯಿಂದ ಪೂಜಾರ ಸಮುದಾಯದವರಿಗೆ ಬೇಸರ ಉಂಟಾಗಿದೆ,ಅವರು ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆಯದೇ ಇದ್ದರೆ ಬ್ರಹ್ಮಶ್ರಿ ನಾರಾಯಣ ಗುರು ಬಿಲ್ಲವ ಸಮಾಜ ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಘಟಕದ ವತಿಯಿಂದ ಬೇಳೂರು ಗೋಪಾಲಕೃಷ್ಣ ವಿರುದ್ದ ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಲ್ಲವ ಸಮಾಜದ ಪ್ರಧಾನ ಕಾರ್ಯದರ್ಶಿ ಗರ್ತಿಕೆರೆ ನಯನ್ ಕುಮಾರ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *