ಶಿವಮೊಗ್ಗ : ಕ್ರೈಸ್ತ ಸಮುದಾಯವನ್ನ ನಿಯಂತ್ರಿಸಲು ಮತಾಂತರ ಕಾಯ್ದೆ ಜಾರಿಗೊಳಿಸಬೇಕೆಂಬ ಚರ್ಚೆ ಆಗುತ್ತಿದ್ದು ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಎಲ್ಲೂ ಮತಾಂತರ ಮಾಡುತ್ತಿಲ್ಲವೆಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸ್ಪಷ್ಟಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬಿ.ರಾಜಶೇಖರ್ ಮಾತನಾಡಿ, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಮಾತನಾಡಿ, ಕ್ರೈಸ್ತ ಮಿಷನರಿಗಳಿಂದ ವ್ಯಾಪಕ ಮತಾಂತರಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಅತ್ಯಾಚಾರದ ಪ್ರಕರಣಗಳನ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಈ ಕುರಿತು ಸದನದಲ್ಲಿ ಮತಾಂತರ ಕಾಯ್ದೆ ಜಾರಿಗೆ ತರುವ ಬಗ್ಗೆ ಚರ್ಚೆ ಆಗಿದೆ. ಮತಾಂತರ ಕಾಯ್ದೆ ತರುವ ಮೊದಲು ಸದನದಲ್ಲಿ ವ್ಯಾಪಕ ಚರ್ಚೆ ಆಗಬೇಕು ಹಾಗೂ ಸಾರ್ವಜನಿಕ ಚರ್ಚೆಗೂ ಅವಕಾಶ ಮಾಡಿಕೊಡಬೇಕೆಂದು ರಾಜಶೇಖರ್ ಆಗ್ರಹಿಸಿದ್ದಾರೆ.
ಕ್ರೈಸ್ತರು ಭಾನುವಾರ ನಡೆಯುವ ಪ್ರಾರ್ಥನೆಗಳಲ್ಲಿ ತೊಡಗುತ್ತಾರೆ. ಆದರೆ ಈ ಪ್ರಾರ್ಥನೆಗಳ ಮೇಲೆ ಹಿಂದೂ ಪರ ಸಂಘಟನೆಗಳು ದಾಳಿ ಮಾಡಿದ್ದಾರೆ. ಪವಿತ್ರ ಸಂಸ್ಕಾರ ವಸ್ತುಗಳನ್ನ ಅಪವಿತ್ರಗೊಳಿಸಲಾಗಿದೆ. ಬೈಬಲ್ ಗ್ರಂಥಗಳನ್ನ ನಾಶಪಡಿಸಲಾಗಿದೆ.
ಆದರೆ ಇದುವರೆಗೂ ಕ್ರೈಸ್ತ ಸಮುದಾಯದ ಮೇಲೆ ಮತಾಂತರಗೊಳಿಸುವ ಆರೋಪಗಳು ಕೇಳಿ ಬರುತ್ತಿವೆಯೆ ಹೊರತು ಯಾವುದೇ ಆರೋಪಗಳು ಸಾಬೀತಾಗಿಲ್ಲ. ಈ ರೀತಿಯ ದಬ್ಬಾಳಿಕೆಗಳು ಮುಂದುವರೆದಲ್ಲಿ ಸಮುದಾಯ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಸಿದರು.