ವೇದಿಕೆಯ ಮೇಲೆ ಬಹಿರಂಗಗೊಂಡ ಕಿಮ್ಮನೆ ರತ್ನಾಕರ್ ಮತ್ತು ಆರ್‌ಎಂಎಂ ನಡುವಿನ ವೈಮನಸ್ಸು : ಸಭೆಯಿಂದ ಹೊರ ನಡೆದ ಕಿಮ್ಮನೆ :

ಶಿವಮೊಗ್ಗ : ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವೆ ಕಿತ್ತಾಟ ಮುಂದುವರೆದಿದ್ದು ಇಂದು ಸಹ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಛೇರಿಯ ವೇದಿಕೆಯ ಮೇಲೆ ಬಹಿರಂಗವಾಗಿದೆ.

ಇಂದು ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭಾಷಣ ಮಾಡಲು ಮುಂದಾಗಿದ್ದು ಭಾಷಣಕ್ಕೆ ಅಡ್ಡಿಪಡಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡಿರುವ ಆರ್ ಎಂ ಮಂಜುನಾಥ ಗೌಡ ಉಪಸ್ಥಿತರಿದ್ದು, ಅವರ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ ಮುಂದುವರೆಸಿದ್ದಾರೆ.

ನನಗೆ ಹಣ, ಅಧಿಕಾರ ಬೇಕಾಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ. ಹತ್ತು ಕಾರು, ಹತ್ತು ಸಂಸಾರ, ಹತ್ತು ಮನೆ ಕಟ್ಟಿಕೊಳ್ಳಬೇಕು ಅನ್ನುವ ಯಾವುದೆ ಆಸೆ ನನಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಮನುಷ್ಯ ನಾನು. ಹಣ ಮತ್ತು ಅಧಿಕಾರಕ್ಕಾಗಿ ಬರುವವನು ನಾನಲ್ಲ. ನನ್ನನ್ನು ಮೆಟ್ಟಿ ಅಂತಹವರನ್ನು ಗೆಲ್ಲಿಸುವ ಯೋಚನೆಯನ್ನು ಯಾರಾದರೂ ಮಾಡಿದ್ದರೆ ಅದನ್ನು ಇವತ್ತೇ ಬಿಟ್ಟುಬಿಡಿ.

ಯಾವ ಪಕ್ಷಕ್ಕೆ ಹೋದರೂ ನಾನು ಹಣ ಕೊಟ್ಟಿದ್ದೇನೆ ಅಂತಾರೆ. ಒಂದು ದಿನ ಕ್ಯಾನ್ವಾಸ್’ಗೆ ಬರುವುದಿಲ್ಲ. ಚುನಾವಣೆಗೆ ಒಂದು ವರ್ಷ ಇರುವಾಗ ಪಕ್ಷಕ್ಕೆ ಬಂದರೆ ಪಾರ್ಟಿ ಕಟ್ಟುವುದು ಹೇಗೆ. ಪಾರ್ಟಿ ಕಟ್ಟುವವರು ರಾತ್ರಿ ಹಗಲು ಕೆಲಸ ಮಾಡುತ್ತೇವೆ. ಸಾಲ ಮಾಡಿ ಜನರಿಗೆ ದುಡ್ಡು ಕೊಟ್ಟಿದ್ದೇವೆ. ನನ್ನ ಮನೆ ಮಾರಿ ಸಾಲ ಕೊಟ್ಟಿದ್ದೇನೆ. ಈ ರಾಜಕೀಯ ಅಲೆಮಾರಿಗಳು ಬಂದು ನನ್ನೆ ಸೋಲಿಸುತ್ತೇನೆ ಎಂದು ಯೋಚನೆ ಮಾಡಿದ್ದಾರೆ. ಈ ಪ್ರಪಂಚದ ಯಾವ ಶಕ್ತಿಯು ನನ್ನನ್ನು ಕೊಂಡುಕೊಳ್ಳಲು ಆಗುವುದಿಲ್ಲ.ರಾಜಕೀಯ ಅಲೆಮಾರಿಗಳಿಗೆ ನೀವು ಸಪೋರ್ಟ್ ಮಾಡುವುದಾದರೆ ಹಂಡ್ರೆಡ್ ಪರ್ಸೆಂಟ್ ನಾನು ಸುಮ್ಮನಿರಲು ಆಗುವುದಿಲ್ಲ. ನಾನು ಈ ಸಭೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಒಬ್ಬರು ಕಳ್ಳರು ಇಲ್ಲಿಗೆ ಬರ್ತಾರೆ ಅನ್ನೋದು ಗೊತ್ತಾಯ್ತು. ಅದಕ್ಕೆ ಬಂದೆ.

ಇನ್ನು, ಕಿಮ್ಮನೆ ರತ್ನಾಕರ್ ಅವರ ಮಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದರು.ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಮಾತು ಮುಗಿಸಿದ ಕಿಮ್ಮನೆ ರತ್ನಾಕರ್ ಅವರು ಸಭೆಯಿಂದ ನಿರ್ಗಮಿಸಿದರು.

ಪರೋಕ್ಷವಾಗಿ ವೇದಿಕೆಯಲ್ಲಿ ಮಂಜುನಾಥ ಗೌಡರ  ವಿರುದ್ಧ ವಾಗ್ದಾಳಿ ನಡೆಸಿ ಅಲೆಮಾರಿಗಳಿಂದ ಪಕ್ಷಕ್ಕೆ ಅಘಾತವಿದೆ ಎಂದು ಆರೋಪಿಸಿದ್ದಾರೆ.ಆರೋಪ ಮಾಡುತ್ತಿದ್ದಂತೆ  ಕಿಮ್ಮನೆ ಭಾಷಣಕ್ಕೆ ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.ನಂತರ  ಕಾರ್ಯಕ್ರಮವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಕಿಮ್ಮನೆ ರತ್ನಾಕರ್ ಹೊರ ನಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಕೆಲ ಹೊತ್ತು ಗೊಂದಲ ವಾತಾವರಣ ನಿರ್ಮಾಣವಾಯಿತು. ಜೊತೆಗೆ ಪಕ್ಷದಲ್ಲಿ ನಾಯಕರ ನಡುವಿನ ಬಿರುಕು ದೊಡದಾಗುತ್ತಾ ಇದ್ದರೂ ಕೈ ನಾಯಕರು ತಲೆ ಕೆಡಿಸಿಕೊಂಡತ್ತಿಲ್ಲ.

ಕಲ್ಕೋಪ್ಪದಿಂದ ಮಂಜುನಾಥ್ ಗೌಡರು ತೀರ್ಥಹಳ್ಳಿಯ ವರೆಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ
ಒತ್ತಾಯಿಸಿ ಸೆ.26 ರಿಂದ ನಡೆದ ಪಾದಯಾತ್ರೆಯ ವೇಳೆ ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರವನ್ನ ಬರೆದು ಆರ ಎಂ ಮಂಜುನಾಥ ಗೌಡರ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು.

ಅವರ ಮೇಲಿನ ಅಸಮಾಧಾನ ಪಕ್ಷದ ವೇದಿಕೆ ಮೇಲೆ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ. ಇದನ್ನ ಸರಿಪಡಿಸಬೇಕಾದ ಪಕ್ಷ ಇನ್ನೂ ಕಾದು ನೋಡುವ ತಂತ್ರಕ್ಕೆ ಜಾರಿದೆ. ಜಿಲ್ಲಾಧ್ಯಕ್ಷರ ಮುಂದೆ ಅಸಮಾಧಾನ ನಡೆದರೂ ಏನೂ ಆಗಿಲ್ಲವೆಂಬಂತೆ ಪಕ್ಷದಾದ್ಯಂತ ಎಲ್ಲರೂ  ಮೌನಕ್ಕೆ ಶರಣಾಗಿದ್ದಾರೆ.

ಕೆಪಿಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದ ರಾಜ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ರಾಜ್ಯಸಂಚಾಲಕರು ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *