Headlines

ಆರಗ ಬಳಿ ಮೃತದೇಹ ಸಮೇತ ಕಾರು ಸುಟ್ಟ ಪ್ರಕರಣ : ಮೃತ ವ್ಯಕ್ತಿಯ ಪತ್ನಿ ಸೇರಿ ಐವರ ಬಂಧನ

ತೀರ್ಥಹಳ್ಳಿ : ತಾಲೂಕಿನ ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿ ಪಂಜರ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೃತನನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ವಿನೋದ್ ಅವರನ್ನು ಮನೆಯಲ್ಲಿಯೇ ಆತನ ಪತ್ನಿ ಮತ್ತು ಸಹಚರರು ಕೊಲೆಗೈದು ಮಿಟ್ಲಗೋಡು ಕಾಡಿನಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸುಟ್ಟ ಕಾರು, ಅಸ್ಥಿ ಪಂಜರ ಪತ್ತೆಯಾಗಿರುವ ಸಂಬಂಧ ಜೇಡಿಕುಣಿ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದ್ದರು. ತನಿಖೆ ನಡೆಸಿದ ತೀರ್ಥಹಳ್ಳಿ ಪೊಲೀಸರಿಗೆ ಮೃತ ವಿನೋದ್’ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಹೆಂಡತಿಯ ಅಕ್ಕನ ಮಗ ಮತ್ತು ಮೃತನ ತಮ್ಮನ ಕೈವಾಡ ಇರುವುದು ತಿಳಿದು ಬಂದಿತ್ತು.

ಕೌಟುಂಬಿಕ ಕಲಹದ ಹಿನ್ನೆಲೆ ವಿನೋದ್’ನ ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ. ಇದೆ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸೆಪ್ಟೆಂಬರ್ 25ರಂದು ಐವರು ಆರೋಪಿಗಳು ವಿನೋದ್ ಕೊಲೆಗೆ ಸಂಚು ರೂಪಿಸಿದ್ದಾರೆ. ಸೆಪ್ಟೆಂಬರ್ 26ರಂದು ಬೆಳಗ್ಗೆ ಆನಂದಪುರದ ಪೆಟ್ರೋಲ್ ಬಂಕ್’ನಲ್ಲಿ ಪೆಟ್ರೋಲ್ ಖರೀದಿಸಿಟ್ಟುಕೊಂಡಿದ್ದರು.

ಸೆ.26ರಂದು ರಾತ್ರಿ 8.30ರ ಹೊತ್ತಿಗೆ ಮನೆಯಲ್ಲೇ ತಂತಿ ಬಿಗಿಯುವ ರಾಡ್, ಸುತ್ತಿಗೆ, ಕಬ್ಬಿಣದ ಪೈಪ್ ರಾಡ್’ನಿಂದ ಹೊಡೆದು ವಿನೋದ್ ಅವರ ಕೊಲೆ ಮಾಡಲಾಗಿದೆ.

ವಿನೋದ್ ಬಳಸುತ್ತಿದ್ದ ಕಾರಿನಲ್ಲೇ ಅವರ ಮೃತದೇಹವನ್ನು ಸಾಗಿಸಲಾಗಿದೆ. ತನಿಖೆ ವೇಳೆ ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು, ಆರೋಪಿಗಳು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿದ್ದರು. ಮನೆಯಲ್ಲೇ ಮೊಬೈಲ್’ಗಳನ್ನು ಇಟ್ಟು ಹೋಗಿದ್ದರು.

ಕಾರಿನಲ್ಲಿ ಯಡೇಹಳ್ಳಿ, ರಿಪ್ಪನ್ ಪೇಟೆ, ಹುಂಚದಕಟ್ಟೆ, ಶಂಕ್ರಳ್ಳಿ, ಮಲ್ಲೇಸರ ಮಾರ್ಗವಾಗಿ ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಗ್ರಾಮದ ಹುಣಸೆಕೊಪ್ಪ ಅರಣ್ಯ ಪ್ರದೇಶಕ್ಕೆ ಮೃತದೇಹ ತಂದಿದ್ದಾರೆ. ಚಾಲಕನ ಸೀಟಿನಲ್ಲಿ ಮೃತದೇವನ್ನು ಇರಿಸಿದ್ದಾರೆ. ಮೊದಲೆ ಖರೀದಿಸಿಟ್ಟಿದ್ದ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ.ಕಾರಿನ ನಂಬರ್ ಪ್ಲೇಟ್ ಮತ್ತು ವಿನೋದ್ ಬಳಸುತ್ತಿದ್ದ ಮೊಬೈಲ್ ಫೋನನ್ನು ದಾರಿ ಮಧ್ಯೆ ಎಸೆದು ಆರೋಪಿಗಳು ಮನೆಗೆ ಮರಳಿದ್ದರು.

ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ಕೊಲೆ ಮಾಡಿದ್ದ ಜಾಗವನ್ನು ಫಿನಾಯಲ್ ಬಳಸಿ ಸ್ವಚ್ಛಗೊಳಿಸಿದ್ದರು. ಇದಿಷ್ಟೆ ಅಲ್ಲ, ಕೃತ್ಯದ ವೇಳೆ ಆರೋಪಿಗಳು ಬಳಸಿದ್ದ ಬಟ್ಟೆ, ಚಪ್ಪಲಿಗಳನ್ನು ಮನೆಯ ಹಿಂಭಾಗದಲ್ಲಿ ಸುಟ್ಟು ಹಾಕಿದ್ದರು.

ತನಿಖೆ ವೇಳೆ ಪತ್ನಿಯ ಮೇಲೆಯೇ ಅನುಮಾನಗೊಂಡ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದರು. ಈ ವೇಳೆ ವಿನೋದ್ ಕೊಲೆಯ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ. ಪೊಲೀಸರು ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *