ರಿಪ್ಪನ್ ಪೇಟೆ: ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಹೋಬಳಿ ರಿಪ್ಪನ್ ಪೇಟೆ ವ್ಯಾಪ್ತಿಯ ನಾಡಕಛೇರಿಯಲ್ಲಿನ ಅವ್ಯವಸ್ಥೆಯಿಂದ ಜನಸಾಮಾನ್ಯರು ಪ್ರತಿದಿನ ಪರದಾಡುವಂತಾಗಿದೆ.
ರಿಪ್ಪನ್ ಪೇಟೆ ಹೋಬಳಿ ವ್ಯಾಪ್ತಿಯು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯ ವಿಧವಾ ವೇತನ, ವೃದ್ಯಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬೆಳೆ ದೃಡೀಕರಣ ಪತ್ರ, ಜಮೀನು ಸರ್ವೇಗಾಗಿ ಭೂ ಮಾಪನಾ ಅರ್ಜಿ ಸಲ್ಲಿಕೆ, ವಾಸಸ್ಥಳ, ವಂಶವೃಕ್ಷ, ಅತ್ಯವಶ್ಯಕ ದೃಡೀಕರಣ ಪತ್ರಗಳು ಸೇರಿ ವಿವಿಧ ಯೋಜನೆಗಳ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ನಿತ್ಯ ಅಲೆದಾಡುವಂತಾಗಿದೆ.
ಪ್ರಮಾಣಪತ್ರ ಮುದ್ರಣ ಕ್ಕೆ ಕಾಗದಗಳ ಕೊರತೆ, ಪ್ರಿಂಟರ್ ರಿಪೇರಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದಾಗಿ ರಿಪ್ಪನ್ ಪೇಟೆ ನಾಡಕಛೇರಿಯಲ್ಲಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಹಾಗು ಸವಲತ್ತು ಪಡೆಯಲು ಸಾರ್ವಜನಿಕರು ನಿತ್ಯ ಹರಸಾಹಸ ಪಡುವಂತಾಗಿದೆ.
ಯುಪಿಎಸ್ ಇಲ್ಲದೆ ವಿದ್ಯುತ್ ನೇರ ಸರಬರಾಜು ಆಗುವಾಗ ಮಾತ್ರ ಆನ್ಲೈನ್ ತಂತ್ರಾಂಶ ಕೆಲಸ ಮಾಡುತ್ತದೆ, ವಿದ್ಯುತ್ ಕೈ ಕೊಟ್ಟರೆ ಎಲ್ಲ ಕೆಲಸಗಳು ಸ್ಥಗಿತಗೊಳ್ಳುತ್ತಿವೆ.ನಾಡಕಚೇರಿ ಸಮಸ್ಯೆಗಳ ಗೂಡಾಗಿರುವುದು ತಿಳಿದಿದ್ದರೂ ಜಿಲ್ಲಾ ಹಾಗೂ ತಾಲೂಕು ಆಡಳಿತ ಯಂತ್ರ ಮೌನಕ್ಕೆ ಜಾರಿದೆ.
ಇಲ್ಲಿನ ಅವ್ಯವಸ್ಥೆಯನ್ನು ಗಮನಿಸಿಯೇ ಅನೇಕ ಸಾರ್ವಜನಿಕರು ನಾಡಕಛೇರಿಯ ಕಡೆ ಮುಖ ಮಾಡದೇ ಖಾಸಗಿ ಸೈಬರ್ ಕೇಂದ್ರದಲ್ಲಿ ದುಬಾರಿ ಶುಲ್ಕ ಪಾವತಿಸಿ ತಮ್ಮ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.ದುಬಾರಿ ಶುಲ್ಕ ಪಾವತಿಸಲು ಆಗದ ಬಡವರ ಪರಿಸ್ಥಿತಿ ಏನು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅರ್ಜಿದಾರರು ಕಚೇರಿಯ ಸಿಬ್ಬಂದಿಯನ್ನೂ ಪ್ರಶ್ನಿಸಿದರೆ ತಾಂತ್ರಿಕ ಸಮಸ್ಯೆಗಳ ಉತ್ತರ ನೀಡಿ ಸಾಗಹಾಕುತ್ತಿದ್ದಾರೆ, ತಾಲೂಕು ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಹೋದರೆ ಹೋಬಳಿ ಕೇಂದ್ರದಲ್ಲೇ ಸಲ್ಲಿಸುವಂತೆ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ, ಇಲ್ಲಿಗೆ ಬಂದರೆ ಮತ್ತದೇ ಅಲೆದಾಟವೇ ಹೊರತು ಇಲ್ಲಿನ ಸಮಸ್ಯೆ ಪರಿಹರಿಸಲು ಯಾರೊಬ್ಬರೂ ಮನಸ್ಸು ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ : ರಾಮನಾಥ್