WhatsApp Channel Join Now
Telegram Channel Join Now

ಜೈಪುರ (ಜುಲೈ.12); ಉತ್ತರ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಬಾರೀ ಮಳೆಯಾಗುತ್ತಿದೆ. ಅದರಲ್ಲೂ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಸಿಡಿಲಿನ ಅಬ್ಬರವೂ ಈ ವರ್ಷ ಜೋರಾಗಿದ್ದು, ಈವರೆಗೆ ಉತ್ತರ ಭಾರತದಲ್ಲಿ 28ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಈ ನಡುವೆ ರಾಜಸ್ತಾನದಲ್ಲಿ 18 ಜನ ಸಿಡಿಲಿಗೆ ಬಲಿಯಾಗಿದ್ದಾರೆ. ಈ ಪೈಕಿ 11 ಜನ ಭಾನುವಾರ ಜೈಪುರದ ಅರಮನೆ ಗೋಪುರದ ಮೇಲೆ ನಿಂತು ಒಟ್ಟಾಗಿ ಸೆಲ್ಪೀ ತೆಗೆದುಕೊಳ್ಳುತ್ತಿದ್ದ ವೇಳೆ ಮಿಂಚು ತಾಕಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ಜೈಪುರ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್‌ ಬಳಿಯ ವಾಚ್ ಟವರ್‌ನಲ್ಲಿ ಭಾನುವಾರ ಈ ಘಟನೆ ಸಂಭವಿಸಿದ್ದು, ಸಿಡಿಲು ಬಡಿದು 11 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, 11 ರಿಂದ 12 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಮೆರ್‌ ಪ್ಯಾಲೆಸ್‌ ಬಳಿಯ ವಾಚ್‌ ಟವರ್‌ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್‌ ಟವರ್‌ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
“ಇದುವರೆಗೆ 11 ಜನರು ಸಾವನ್ನಪ್ಪಿದ್ದಾರೆ. 11 ರಿಂದ 12 ಜನರು ಗಾಯಗೊಂಡಿದ್ದಾರೆ” ಎಂದು ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ ತಿಳಿಸಿದ್ದಾರೆ.
“ಭಾನುವಾರ ರಾತ್ರಿ 7.30 ರ ಸುಮಾರಿಗೆ ಅಮೆರ್ ಕೋಟೆಯ ಎದುರಿನ ಬೆಟ್ಟಗಳಲ್ಲಿರುವ ವಾಚ್ ಟವರ್‌ನಲ್ಲಿ ಸಿಡಿಲು ಮಿಂಚು ಬಡಿದು ಈ ಘಟನೆ ನಡೆದಿದೆ. ದುರಂತದ ಸ್ಥಳದಲ್ಲೇ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು” ಎಂದು ಅಮೆರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಶಿವನಾರಾಯಣ್ ಹೇಳಿದ್ದಾರೆ.
ಘಟನೆಯ ನಂತರ, ಆರೋಗ್ಯ ಸಚಿವ ರಘು ಶರ್ಮಾ ಅವರು ಗಾಯಾಳುಗಳನ್ನು ದಾಖಲಿಸಿದ್ದ ಎಸ್ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ದುರಂತದ ವೇಳೆ ವಾಚ್ ಟವರ್‌ ಮೇಲೆ 27 ಜನರು ಇದ್ದರು ಎನ್ನಲಾಗಿದೆ.
ಇತ್ತ ಕೋಟಾದ ಗಾರ್ಡಾ ಗ್ರಾಮದಲ್ಲಿ, ಮಳೆಯಿಂದ ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದ ನಾಲ್ಕು ಜನರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯಪಾಲ ಕಲ್ರಾಜ್ ಮಿಶ್ರಾ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.






ವರದಿ:ರಾಮನಾಥ್




ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ: 

ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹರಡದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Leave a Reply

Your email address will not be published. Required fields are marked *