ರಿಪ್ಪನ್ ಪೇಟೆ: ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.
ಸುತ್ತ ಮುತ್ತ ನೂರಾರು ಹಳ್ಳಿಗಳ ಕೇಂದ್ರಬಿಂದುವಾಗಿರುವ ರಿಪ್ಪನ್ ಪೇಟೆ ಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದ್ದು,ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ಸುತ್ತಮುತ್ತಲಿನ ಹಳ್ಳಿಗಳಿಂದ ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ಸಾವಿರಾರು ಜನ ಆಗಮಿಸುತ್ತಿದ್ದು ಎಲ್ಲರು ಈ ಸಾರ್ವಜನಿಕ ಶೌಚಾಲಯಕ್ಕೆ ಅವಲಂಬಿತರಾಗಿದ್ದಾರೆ.ಶೌಚಾಲಯ ನಿರ್ವಹಣೆಗೆ ಜನ ಇದ್ದರೂ ಅವರು ಕೇವಲ ಹಣ ವಸೂಲಿಗೆ ಮಾತ್ರ ಮೀಸಲಾಗಿದ್ದಾರೆಯೇ ಹೊರತು ಶೌಚಾಲಯದ ಸ್ವಚ್ಚತೆಯ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.
ಶೌಚಾಲಯದ ಎದುರುಗಡೆ ಇರುವ ಅನಧಿಕೃತ ಮಳಿಗೆಯಿಂದ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಶೌಚಾಲಯ ಬಳಸಲು ಕಿರಿಕಿರಿಯಾಗುತ್ತಿದೆ.ಸ್ಥಳಿಯಾಡಳಿತ ಈ ಅನಧಿಕೃತ ಮಳಿಗೆಯವರಿಗೆ ಪರ್ಯಾಯ ಸ್ಥಳ ಗುರುತಿಸಿ ಅಲ್ಲಿಂದ ತೆರವುಗೊಳಿಸಬೇಕಿದೆ.
ಒಟ್ಟಾರೆಯಾಗಿ ಇಲ್ಲಿನ ಸಾರ್ವಜನಿಕ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ.ರಿಪ್ಪನ್ ಪೇಟೆಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸ್ಥಳೀಯಾಡಳಿತದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ.
ವರದಿ: ರಾಮನಾಥ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..