ಮಳೆಯ ಗಾಳಿ ಅಬ್ಬರಕ್ಕೆ ಶಿವಮೊಗ್ಗ – ಆಯನೂರು ಮಾರ್ಗದಲ್ಲಿ ನೆಲಕ್ಕುರುಳಿದ ಮರ – ವಾಹನ ಸಂಚಾರಕ್ಕೆ ವ್ಯತ್ಯಯ
ಶಿವಮೊಗ್ಗ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನಲೆಯಲ್ಲಿ ಸಾರ್ವಜನಿಕ ಬದುಕು ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯನೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಗುರುವಾರ ಮಧ್ಯಾಹ್ನದ ವೇಳೆ ರಸ್ತೆಯ ಬದಿಯಲ್ಲಿದ್ದ ಬೃಹತ್ ಮರವೊಂದು ದಿಡೀರ್ ಎಂಬಂತೆ ಧರೆಗುರುಳಿದೆ.
ಮರ ಧರೆಗುರುಳಿದ ವೇಳೆ ಅದೇ ರಸ್ತೆಯಲ್ಲಿ ಕೆಲವೊಂದು ವಾಹನಗಳು ಸಂಚರಿಸುತ್ತಿದ್ದರೂ, ಅಪಾಯದಿಂದ ತೀವ್ರ ಅನಾಹುತ ತಪ್ಪಿದೆ ಎಂಬುದು ಭಾಗ್ಯವೆನಿಸಿತು. ಆದರೆ ಈ ಘಟನೆ ಪರಿಣಾಮವಾಗಿ ಸುಮಾರು ಅರ್ಧ ಗಂಟೆಯಷ್ಟು ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಟ್ರಾಫಿಕ್ ಜ್ಯಾಮ್ ಉಂಟಾಗಿ ವಾಹನ ಸವಾರರು ತೀವ್ರ ಅಸಹನೆ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳ ಪ್ರಕಾರ, “ಈ ಭಾಗದಲ್ಲಿ ಇತ್ತೀಚೆಗೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಭಾರಿ ಗಾಳಿಯ ಹೊಡೆತಕ್ಕೆ ಮರಗಳು ಉರುಳುತ್ತಿವೆ. ಈ ಬಗ್ಗೆ ಮುಂಚಿತವಾಗಿ ಮರ ತೆರವುಗೊಳಿಸಬೇಕೆಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,” ಎಂದು ಕಿಡಿಕಾರಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ಸಂಚಾರ ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.