ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸರ್ವರ್ ದೋಷ – ಗ್ರಾಹಕರ ಆಕ್ರೋಶ

ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸ್ತೋಮ ಪಡಿತರಕ್ಕಾಗಿ ನಿಂತು ಹೈರಾಣಾಗಿದೆ.ಶುಕ್ರವಾರದಿಂದ ಪಡಿತರ ವಿತರಣೆ ಮಾಡುತ್ತಿದ್ದರೂ, ಎಲ್ಲಾ ಗ್ರಾಹಕರಿಗೆ ಪಡಿತರ ತಲುಪಿಸಲು ಸಾಧ್ಯವಾಗಿಲ್ಲ… ಇದರಿಂದಾಗಿ ಸಾರ್ವಜನಿಕರು ಸಂಬಂಧಿಸಿದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಇದಕ್ಕೆಲ್ಲ ಕಾರಣವಾಗಿದ್ದು ಗ್ರಾಹಕರ ಬೆರಳಚ್ಚು (ಬಯೋಮೆಟ್ರಿಕ್) ಪಡೆಯುವ ಸರ್ವರ್ ಗಳ ದೋಷ , ಇದರಿಂದಾಗಿ ಜನರ ನರಳಾಟ…. ಸರ್ವರ್ ವೈಫಲ್ಯದಿಂದಾಗಿ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ…

ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಪುರುಷೋತ್ತಮ್ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಪಡಿತರಕ್ಕಾಗಿ ದೂರದ ಹಳ್ಳಿಗಳಿಂದ ಬಂದಿದ್ದ ವಯೋ ವೃದ್ದರು ,ಬಡವರು , ಶ್ರಮಿಕರು ಪರದಾಡುತ್ತಿರುವ ಸ್ಥಿತಿ ಕಂಡುಬಂದಿದೆ.ಸ್ಥಳಕ್ಕೆ ತೆರಳಿದ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪಡಿತರ ಮಳಿಗೆಗಳಲ್ಲಿ ಇ-ಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ಆನ್‌ಲೈನ್ ವ್ಯವಸ್ಥೆಯಲ್ಲಿನ ಸರ್ವರ್ ದೋಷದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕ ವಿತರಣೆಯು ಬಿಕ್ಕಟ್ಟಿನಲ್ಲಿ ಮುಳುಗಿದೆ.
ಹಲವು ದಿನಗಳಿಂದ ತೊಂದರೆಯಾಗುತ್ತಿರುವುದರಿಂದ ಕೆಲವು ಕಡೆ ಪಡಿತರ ವಿತರಕರು ತಮ್ಮ ಅಂಗಡಿಯ ಬಾಗಿಲುಗಳನ್ನು ಮುಚ್ಚಿ ಪಡಿತರ ಪೂರೈಕೆಯನ್ನೆ ಸ್ಥಗಿತಗೊಳಿಸಿದ್ದಾರೆ.

ತಾಲೂಕಿನ ಬಹುತೇಕ ಭಾಗಗಳಲ್ಲಿ  ಪಡಿತರ ಚೀಟಿದಾರರು, ತಮ್ಮ ಆಹಾರ ಪದಾರ್ಥಗಳನ್ನು ಪಡೆಯಲು ಅರ್ಧ ಗಂಟೆಗೂ ಹೆಚ್ಚಿನ ಅವಧಿ ಕಾಯುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರು ತಿಂಗಳ ಪಡಿತರವನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ  ಬಯೋಮೆಟ್ರಿಕ್ ಸರ್ವರ್ ದೋಷದಿಂದಾಗಿ ಬಡಜನರು ದುಡಿಮೆಯನ್ನು ಬಿಟ್ಟು ಪಡಿತರಕ್ಕಾಗಿ ಕಾದು ಕೂರುವಂತಾಗಿದೆ.

ಕೆಲವೆಡೆ ಫಲಾನುಭವಿಗಳು ಗಂಟೆಗಳ ಕಾಲ ಪಡಿತರ ಅಂಗಡಿಗಳ ಹೊರಗೆ ಕಾದು ಬರಿಗೈಯಲ್ಲಿ ಹಿಂದಿರುಗಿದ ಘಟನೆ ನಡೆದಿದೆ.  e-PoS ಯಂತ್ರಗಳು ಪ್ರಾರಂಭದಲ್ಲಿ ಆಗಾಗ್ಗೆ ಆಫ್‌ಲೈನ್‌ಗೆ ಹೋಗುತ್ತವೆ ಎಂದು ಪಡಿತರ ವಿತರಕರು ದೂರಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸರ್ವರ್ ಸಮಸ್ಯೆ ಬಗೆಹರಿಸುವುದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಬದಲು ನ್ಯಾಯಬೆಲೆ ಅಂಗಡಿಗಳನ್ನೆ ನಡೆಸುವುದು ಕಷ್ಟಕರವಾಗಿದೆ ಎಂದು ಪಡಿತರ ವಿತರಕರು ಅಳಲು ವ್ಯಕ್ತಪಡಿಸಿದ್ದಾರೆ.
ಆಹಾರ ಸರಬರಾಜು ಇಲಾಖೆಯ ಬಾಲಚಂದ್ರ ರವರು ಇಲಾಖೆಯಲ್ಲಿ ದತ್ತಾಂಶ ಕೇಂದ್ರದ ಸೆಂಟ್ರಲ್ ಸರ್ವರ್‌ನಲ್ಲಿನ ದೋಷದಿಂದಾಗಿ ಸಮಸ್ಯೆ ಉಂಟಾಗಿದೆ. ಇದರಿಂದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಬಯೋಮೆಟ್ರಿಕ್ ಸರ್ವರ್ ದೋಷವನ್ನು ಕೂಡಲೇ ಸರಿಪಡಿಸಿ ಬಡವರು, ಶ್ರಮಿಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾದು ನಿಲ್ಲುವ ಶಿಕ್ಷೆಯಿಂದ ಮುಕ್ತಿ ನೀಡಬೇಕಾಗಿದೆ.

Leave a Reply

Your email address will not be published. Required fields are marked *