Ripponpete | ರಂಗೋಲಿ ಚಿತ್ತಾರದಲ್ಲಿ ಮತದಾನ ಜಾಗೃತಿ – ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ
ರಿಪ್ಪನ್‌ಪೇಟೆ : ಪಟ್ಟಣದ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನದ ಅರಿವೂ ಮೂಡಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿ ಜಾಥಾ ಹಾಗೂ ಸ್ತ್ರೀ ಶಕ್ತಿ ಸಂಘ ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪಟ್ಟಣದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಪಂಚಾಯ್ತಿ ಶಿವಮೊಗ್ಗ ಹೊಸನಗರ ತಾಲ್ಲೂಕ್ ಪಂಚಾಯ್ತಿ ಸ್ವೀಪ್ ಸಮಿತಿ ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಂದಾಯ ಇಲಾಖೆಸೇರಿ ರಿಪ್ಪನ್‌ಪೇಟೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ , ಮ್ಯೂಸಿಕಲ್ ಚೇರ್ ಹಾಗೂ ಕೆರೆದಡ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಜಾಗೃತಿ ಕುರಿತಾಗಿ ‘ರಂಗೋಲಿ ಚಿತ್ರ’ ಬಿಡಿಸಿದರು. ರಂಗೋಲಿ ಸ್ಪರ್ಧೆ ಮೂಲಕ “ಮತದಾನ ನಮ್ಮ ಹಕ್ಕು, ನಮ್ಮ ಕರ್ತವ್ಯ” ಎಂಬ ಸಂದೇಶ ಸಾರಲಾಯಿತು.ನಂತರ ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಹೊಸನಗರ ತಾಲ್ಲೂಕ್ ಪಂಚಾಯ್ತಿ ಕಾರ್ಯನಿರ್ವಾಹಕ ಆಧಿಕಾರಿ ನರೇಂದ್ರಕುಮಾರ್ ಚುನಾವಣೆ ದೊಡ್ಡ ಪರ್ವ ಮತದಾನ ನಮ್ಮಲ್ಲರ ಹಕ್ಕು ಈ ಭಾರಿಯ ಲೋಕಸಭಾ ಚುನಾವಣೆ ಹೊಸನಗರ ತಾಲ್ಲೂಕಿನಲ್ಲಿ ಮತದಾನದ ಪ್ರಮಾಣ ಹೆಚ್ಚಬೇಕು.ತಾವು ಮತದಾನಮಾಡಿ ಅಕ್ಕಪಕ್ಕದವರೂ ಮತದಾನ ಮಾಡುವಂತೆ ಉತ್ತೇಜಿಸುವುದರೊಂದಿಗೆ ಶೇಕಡಾ 100 ರಷ್ಟು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
”ಮಹಿಳೆಯರು ಹೆಚ್ಚು ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಾರೆ. ಹೀಗಾಗಿ ಮಹಿಳಾ ಮತದಾರರನ್ನು ಮತದಾನದತ್ತ ಸೆಳೆಯುವ ದೃಷ್ಟಿಯಿಂದ ಜಿಲ್ಲಾ ಸ್ವೀಪ್ ಸಮಿತಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ. ಈ ಮೂಲಕ ಕಡ್ಡಾಯ ಮತದಾನದ ಅರಿವು ಮೂಡಿಸಲಾಗುತ್ತದೆ,” ಎಂದರು.
ಪ್ರತಿಯೊಬ್ಬರು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಸಿದ್ದರಾಗಿ ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯ್ತಿ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್,ಗ್ರಾಮ ಪಂಚಾಯ್ತಿ ಪಿಡಿಓ ಮಧುಸೂಧನ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಸಿಬ್ಬಂದಿಗಳಾದ ನಾಗೇಶ್‌ಮೋರೆ,ರಾಜೇಶ್,ಹಾಗೂ ಎನ್.ಆರ್.ಇ.ಜಿ.ತಾಲ್ಲೂಕ್ ಮಟ್ಟದ ಅಧಿಕಾರಿವರ್ಗ ಹಾಜರಿದ್ದರು.