ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಜನರಿಂದ ತುಂಬಿದ್ದ ಖಾಸಗಿ ಚಾಲಕನ ನಿಯಂತ್ರಣ ಮೀರಿ ರಸ್ತೆಯಲ್ಲಿ ಉರುಳಿ ಬಿದ್ದ ಪರಿಣಾಮ ಕನಿಷ್ಠ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಸಹಿತ ಇತರ ಕೆಲಸಗಳಿಗೆ ತೆರಳುವ ಜನ ಕೂಡಾ ಇದೇ ಬಸ್ಸನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಮಾರ್ಗದಲ್ಲಿ ಜನರ ಸಂಚಾರಕ್ಕೆ ಬೇರೆ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಎಸ್‍ವಿಟಿ ಬಸ್ಸಿನಲ್ಲಿ ಸಾಧ್ಯವಾದಷ್ಟು ಜನ ಹತ್ತಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ಸು ವೈಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಹೊರಟಿತ್ತು ಎಂದು ಹೇಳಲಾಗಿದೆ. ಬೆಳಗ್ಗೆ ವೀರಮ್ಮನಹಳ್ಳಿ ದಾಟಿದ ನಂತರ ಪಳವಳ್ಳಿ ಟ್ಯಾಂಕ್ ತಿರುವಿನಲ್ಲಿ ಚಲಾಯಿಸುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿ ಬೆಳಗೆ 9 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.
ಮೃತರನ್ನು ವೈ.ಎನ್. ಹೊಸಕೋಟೆಯ ಕಲ್ಯಾಣ್ (19), ಪೇತಗಾನಹಳ್ಳಿಯ ಅಮೂಲ್ಯ (16), ಬೆಸ್ತರಹಳ್ಳಿಯ ಶಹನಾಜ್ (20), ಶೂಲನಾಯಕನಹಳ್ಳಿ ಗ್ರಾಮದ ಅಜಿತ್ (27) ಎಂದು ಗುರುತಿಸಲಾಗಿದ್ದು, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಸ್ಸು ತಲೆಕೆಳಗಾಗಿ ಬಿದ್ದಿದ್ದು, ಪ್ರಯಾಣಿಕರು ಎಲ್ಲೆಂದರಲ್ಲಿ ಎಸೆಯಲ್ಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ಸುಮಾರು 9 ಮಂದಿಯ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಪಾವಗಡ ಪಟ್ಟಣ, ತುಮಕೂರು ಮತ್ತು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ನಡೆದ ತಕ್ಷಣ ಬಸ್ಸು ಚಾಲಕ ಹಾಗೂ ನಿರ್ವಾಹಕರಿಬ್ಬರು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಬಸ್‍ನಲ್ಲಿ ಕಿಕ್ಕಿರಿದು ಜನ ತುಂಬಿದ್ದು ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದಿದ್ದಾರೆ. ಸಂಜೆಯ ವೇಳೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತೇನೆ ಎಂದು ಪ್ರತಿಕ್ರಯಿಸಿದ್ದಾರೆ.
ಘಟನೆಯ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು. ಮೃತರ ಸಂಬಂಧಿಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪಾವಗಡ ಕಾಂಗ್ರೆಸ್ ಶಾಸಕ ಎಂ ವೆಂಕಟರವಣಪ್ಪ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಮೃತರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಪರಿಹಾರ ಒದಗಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದಿದ್ದಾರೆ.
ಮೃತರ ಹಾಗೂ ಗಾಯಾಳುಗಳ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗ್ಗೆ ಹಾಗೂ ಸಾಯಂಕಾಲ ಹೊತ್ತು ಜನರಿಗೆ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇