Headlines

ಮಲೆನಾಡಿನಲ್ಲಿ ಸ್ಯಾಟಲೈಟ್ ಪೋನ್ ಕಾರ್ಯಾಚರಣೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಪೊಲೀಸರ ಜಂಟಿ ತನಿಖೆ : ಆರಗ ಜ್ಞಾನೇಂದ್ರ

ರಾಜ್ಯದ ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಸಿಗ್ನಲ್ ಗಳು ಅಕ್ರಮವಾಗಿ ಕಾರ್ಯಾಚರಣೆ ಪತ್ತೆಯ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

“ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಕಾರ್ಯಾಚರಣೆ ಕುರಿತು ರಾಜ್ಯದ ಪೊಲೀಸರು ಕೇಂದ್ರದ ಐ ಬಿ ಸಂಸ್ಥೆ ಸಿಬ್ಬಂದಿಗಳ ಜತೆಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು ಜಂಟಿಯಾಗಿ ತನಿಖೆ ನಡೆಸಲಾಗುತ್ತಿದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳೂರು ಕಿನಾರೆ ಹಾಗೂ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿಗಳು ತನಿಖೆಯಲ್ಲಿ ಕೈ ಜೋಡಿಸಿದ್ದಾರೆ.

ನಿಷೇಧಿತ ಸ್ಯಾಟಲೈಟ್ ಫೋನ್ ಕಾರ್ಯಾಚರಣೆಯ ಹಿಂದಿನ ದುಷ್ಟರು ಯಾರಿದ್ದಾರೆ ಹಾಗೂ ಯಾರ ಜತೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದರ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.



ಮಲೆನಾಡಿನಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್ ಫೋನ್…!

ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ದಾಳಿ ಬಳಿಕ ಸದ್ದಡಗಿದ್ದ ನಿಷೇಧಿತ ಸ್ಯಾಟಲೈಟ್‌ ಫೋನ್‌ಗಳು ಮತ್ತೆ ರಿಂಗಣಿಸಲು ಶುರು ಮಾಡಿವೆ. ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದ ದಟ್ಟಾರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್‌ ಫೋನ್‌ ಕರೆಯ ಲೊಕೇಶನ್‌ ಕಂಡುಬಂದಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆಮಾಡಿದೆ.

ಚಿಕ್ಕಮಗಳೂರಿನ ದಟ್ಟ ಅರಣ್ಯ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ನ ಕರೆಯ ಕುರಿತಾದ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಬೀರೂರು ನಡುವಿನ ದಟ್ಟ ಅರಣ್ಯ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ಗಳು ಸದ್ದು ಮಾಡಿದೆ ಎಂಬ ಮಾಹಿತಿಯು ಬೇಹುಗಾರಿಕಾ ಏಜೆನ್ಸಿಗಳಿಗೆ ಲಭ್ಯವಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು, ಪೊಲೀಸರು ಈ ಸಂಬಂಧ ಅಲರ್ಟ್ ಆಗಿದ್ದಾರೆ.ಕಳೆದ ಹತ್ತು ದಿನಗಳಲ್ಲಿ ಮಂಗಳೂರು ನಗರ ಹೊರಭಾಗದ ನಾಟೆಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ದಟ್ಟ ಅರಣ್ಯ ಪ್ರದೇಶ, ಉತ್ತರಕನ್ನಡದ ಯಲ್ಲಾಪುರ, ಸಿರಸಿ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಕೆಲ ತಿಂಗಳುಗಳ ಹಿಂದೆ ರಿಂಗಣಿಸಿದ ಸ್ಯಾಟಲೈಟ್ ಫೋನ್ ಗಳು ಮತ್ತೆ ರಿಂಗಣಿಸುತ್ತಿರುವುದು ಅನೇಕ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ಆಕ್ಟೀವ್ ಆಗಿದ್ದ ಸ್ಯಾಟಲೈಟ್ ಫೋನ್ ಗಳು ಇದೀಗ ಮತ್ತೆ ಆನ್ ಆಗಿದೆ.

ಕರಾವಳಿ ಭಾಗದಲ್ಲೂ ಮತ್ತೊಮ್ಮೆ ಸ್ಯಾಟಲೈಟ್ ಫೋನ್ ಆಕ್ಟೀವ್..:

ಕರಾವಳಿ ಭಾಗದಲ್ಲೂ ಮತ್ತೊಮ್ಮೆ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿರುವ ಮಾಹಿತಿ ಲಭ್ಯವಾಗಿದೆ. ಕರಾವಳಿ ಜಿಲ್ಲೆಗಳ ಮೂರು ಸ್ಥಳಗಳಲ್ಲಿ ಮತ್ತು ಚಿಕ್ಕಮಗಳೂರಿನ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.
ಕಳೆದ 10 ದಿನಗಳ ಅವಧಿಯಲ್ಲಿ 4 ಕಡೆಗಳಿಂದ ಸಂಪರ್ಕ ಸಾಧಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿ ಮಧ್ಯೆ ಇರುವ ದಟ್ಟಾರಣ್ಯ ಪ್ರದೇಶ,‌ ಮಂಗಳೂರು ನಗರ ಹೊರಭಾಗದ ನಾಟೇಕಲ್ ಮತ್ತು ಕುಳಾಯಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು – ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವುದನ್ನು ಬಗ್ಗೆ ಗುಪ್ತಚರ ಇಲಾಖೆ ಪತ್ತೆ ಮಾಡಿದೆ.

ಮೇ 23ರಿಂದ ಮೇ 29ರ ನಡುವೆ ಸ್ಯಾಟಲೈಟ್ ಫೋನ್ ಮೂಲಕ ದಟ್ಟಾರಣ್ಯ ಪ್ರದೇಶಗಳಲ್ಲಿ ಸಂಪರ್ಕ‌ ಸಾಧಿಸಲ್ಪಟ್ಟಿದ್ದು, ಸ್ಯಾಟಲೈಟ್ ಫೋನ್ ಲೊಕೇಶನ್ ಅನ್ನು ಗುಪ್ತಚರ ಏಜೆನ್ಸಿಗಳು ಪತ್ತೆ ಹಚ್ಚಿವೆ.‌


ಸ್ಯಾಟ್ ಲೈಟ್ ಕರೆ ಬಗ್ಗೆ ಭಯವೇಕೆ..!?

ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳ ಸಂಪರ್ಕದ ಅಗತ್ಯವಿಲ್ಲದೆ ನೇರವಾಗಿ ಉಪಗ್ರಹದ ಸಹಾಯದಿಂದ ಕರೆ ಮಾಡಬಹುದಾದ ಸಾಧನವೇ ಸ್ಯಾಟಲೈಟ್ ಫೋನ್. ಇದನ್ನು ಸಾಮಾನ್ಯ ಜನರು ಬಳಸುವುದಿಲ್ಲ. ಬದಲಾಗಿ ನಕ್ಸಲರು, ಉಗ್ರಗಾಮಿಗಳು, ಭೂಗತ ಪಾತಕಿಗಳು ಸ್ಥಳೀಯ ಭದ್ರತಾ ವ್ಯವಸ್ಥೆಯ ಕಣ್ತಪ್ಪಿಸಲು ಇಂತಹ ಸಾಧನವನ್ನು ಬಳಸುತ್ತವೆ.ಈ ಹಿಂದೆ ಸ್ಯಾಟಲೈಟ್ ಫೋನ್ ಗಳ ಬಳಕೆ ದೇಶದಲ್ಲಿತ್ತು.

ಆದರೆ 2008 ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸ್ಯಾಟಲೈಟ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ‌.ಆದ್ದರಿಂದ ಇಂತಹ ಕರೆ ದೇಶದ ಯಾವ ಭಾಗದಿಂದ ಹೊರಟರೂ ಭದ್ರತಾ ಪಡೆಗಳು ವಿಶೇಷ ಗಮನ ಹರಿಸುತ್ತವೆ. ಮಲೆನಾಡು ಭಾಗದಲ್ಲಿ ನಕ್ಸಲ್‌ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬಳಿಕ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಿಗೆ  ಸಂಪೂರ್ಣ ತಡೆಬಿದ್ದಿತ್ತು.

ಸರ್ಕಾರ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಕ್ಯಾಂಪ್ ಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿತ್ತು. ಅದರಂತೆ ಕೆಲ ದಿನಗಳಿಂದ ನಕ್ಸಲ್ ನಿಗ್ರಹ ಕ್ಯಾಂಪ್ ಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ  ಪೊಲೀಸ್ ಅಧಿಕಾರಿಗಳು ತಮ್ಮ ಮೂಲ ಇಲಾಖೆಗೆ ವಾಪಸ್ಸಾಗಿದ್ದರು.ಆದರೆ ಈ ನಡುವೆ ಮತ್ತೆ ಮಲೆನಾಡು ದಟ್ಟಾರಣ್ಯ ಭಾಗದಲ್ಲಿ ಸ್ಯಾಟಲೈಟ್ ಫೋನುಗಳು ಪುನಃ ಆ್ಯಕ್ಟೀವ್ ಆಗಿರುವುದು ಮತ್ತೆ ಆತಂಕ‌ ಸೃಷ್ಟಿಸಿದೆ.

Leave a Reply

Your email address will not be published. Required fields are marked *