ಎರಡು ಕಾರುಗಳು, ಬಸ್ಸು ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ, ನಾಲ್ವರು ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ಕುಗ್ವೆ ಕ್ರಾಸ್ ಬಳಿ ಸಂಜೆ ಸಂಭವಿಸಿದೆ.
ಕುಗ್ವೆ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾಗನಾರ್ ಕಾರು, ಬೈಕ್, ಕಾರು ಮತ್ತು ಬಸ್ಸಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಜೋಗ ನಿವಾಸಿಗಳಾದ ಕೃಷ್ಣಮೂರ್ತಿ, ಬಾಲಕೃಷ್ಣ, ಮಧು ಮತ್ತು ಶ್ರೀಧರ್ ಎಂಬುವವರಿಗೆ ತೀವ್ರ ಗಾಯವಾಗಿದೆ. ಅವರನ್ನು ಕೂಡಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ವ್ಯಾಗನಾರ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಡಿ ಸಿಲುಕಿ ಬೈಕ್ ಜಖಂ ಆಗಿದೆ. ಮತ್ತೊಂದು ಕಾರಿಗೂ ದೊಡ್ಡ ಮಟ್ಟದ ಹಾನಿಯಾಗಿದೆ. ಬಸ್ಸಿನ ಮುಂಭಾಗ ಜಖಂ ಆಗಿದ್ದು, ಗಾಜು ಪುಡಿಯಾಗಿದೆ.
ಸಾಗರ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಸುಜತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಹಿನ್ನೆಲೆ ಕುಗ್ವೆ ಕ್ರಾಸ್ ನಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು.